ಪುತ್ತೂರು: ಗದಗ ಜಿಲ್ಲೆಯಿಂದ ಪುತ್ತೂರಿಗೆ ಬಂದು ರಸ್ತೆ ಬದಿಯ ಬಿಕ್ಷುಕರೊಂದಿಗೆ ಕಾಲ ಕಳೆಯುತ್ತಿದ್ದ ವ್ಯಕ್ತಿ ಅನಾರೋಗ್ಯದ ಹಿನ್ನೆಲೆಯಲ್ಲಿ ಸರಕಾರಿ ಆಸ್ಪತ್ರೆಗೆ ಹೋದಾಗ ತನಗೆ ಕೋವಿಡ್ ಪಾಸಿಟಿವ್ ವರದಿ ಬಂದಿರುವ ಕುರಿತು ಭಯಪಟ್ಟು ಪಲಾಯನ ಮಾಡಿದ್ದ,
ಮದ್ಯ ಸೇವಿಸಿ ಮಲಗಿದ್ದ ಸೋಂಕಿತನನ್ನು ನಗರಸಭಾ ಹಿರಿಯ ನಿರೀಕ್ಷಕಿ ಶ್ವೇತಾ ಕಿರಣ್ ಅವರ ನೇತೃತ್ವದ ತಂಡ ಮತ್ತೆ ಸರಕಾರಿ ಆಸ್ಪತ್ರೆಗೆ ಸೇರಿಸುವ ಮೂಲಕ ಸಮಯಪ್ರಜ್ಞೆ ಮೆರೆದಿದ್ದಾರೆ.
ನಗರದ ಮಹಾಮಾಯಿ ದೇವಳ ರಸ್ತೆಯಲ್ಲಿ ಇನ್ನಿತರ ಕೆಲವು ಉ.ಕರ್ನಾಟಕ ಮೂಲದ ವ್ಯಕ್ತಿಗಳೊಂದಿಗೆ ಕಾಲ ಕಳೆಯುತ್ತಿದ್ದ. ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾದ ಈತ ನೇರವಾಗಿ ಸರಕಾರಿ ಆಸ್ಪತ್ರೆಗೆ ಬಂದು ಕೋವಿಡ್ ತಪಾಸಣೆ ಮಾಡಿಕೊಂಡಿದ್ದ. ಪ್ರಾಥಮಿಕ ತಪಾಸಣೆಯಲ್ಲೇ ಕೊರೊನಾ ಸೋಂಕು ತಗುಲಿರುವುದು ಗೊತ್ತಾಗುತ್ತಲೇ ಮೇ 11ರ ರಾತ್ರಿ ಆತ ಹಠಾತ್ ನಾಪತ್ತೆಯಾದ ಎನ್ನಲಾಗಿದೆ. ಈ ಬಗ್ಗೆ ಸರಕಾರಿ ಆಸ್ಪತ್ರೆಯಿಂದ ಪುತ್ತೂರು ನಗರಸಭೆಗೆ ಮಾಹಿತಿ ನೀಡಲಾಗಿತ್ತು. ಆದರೆ ಆತ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಮೇ 12ರಂದು ಮಧ್ಯಾಹ್ನ ನಗರಸಭಾ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್ ಮತ್ತು ಸಿಬ್ಬಂದಿಗಳು ಇಲ್ಲಿನ ನೆಲ್ಲಿಕಟ್ಟೆ ಶಾಲೆಯಲ್ಲಿ ತೆರೆಯಲಾದ ಪಾಲನಾ ಕೇಂದ್ರದಲ್ಲಿ ವಾಸ್ತವ್ಯ ಹೊಂದಿರುವ ಲಾಕ್‌ಡೌನ್ ಸಂತ್ರಸ್ತರಿಗೆ ಮಧ್ಯಾಹ್ನದ ಆಹಾರ ನೀಡಲು ಹೋಗಿದ್ದಾಗ, ನಾಪತ್ತೆಯಾದ ವ್ಯಕ್ತಿ ಮದ್ಯ ಸೇವಿಸಿ ಮಲಗಿರುವುದು ಪತ್ತೆಯಾಗಿದೆ. ತಕ್ಷಣ ಜಾಗೃತರಾದ ಅಧಿಕಾರಿಗಳು ಆತನನ್ನು ಮರಳಿ ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್‌ಗಾಗಿ ಯತ್ನಿಸಿದರು. ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಅವರ ಸೂಚನೆಯ ಮೇರೆಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಲಾಯಿತಾದರೂ ಆತನಿಗೆ ವಿಪರೀತ ಜ್ವರ ಇರುವ ಹಿನ್ನೆಲೆಯಲ್ಲಿ ಆತನನ್ನು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಮದ್ಯ ಸೇವಿಸಿ ಮಲಗಿದ್ದೆ:
ಆಸ್ಪತ್ರೆಯಲ್ಲಿ ಕೋವಿಡ್ ಪಾಸಿಟಿವ್ ವರದಿಯಿಂದ ಹೆದರಿಕೆಯಾಯಿತು. ಹಾಗಾಗಿ ನನ್ನಲ್ಲಿದ್ದ ಎರಡು ಕ್ವಾಟರ್ ಮದ್ಯ ಬಾಟಲಿಗಳನ್ನು ಅಲ್ಲಿ ಸೇವಿಸಲು ಆಗುವುದಿಲ್ಲ ಎಂದು ಆಸ್ಪತ್ರೆಯಿಂದ ಪಲಾಯನ ಮಾಡಿ ಚಿಣ್ಣರ ಪಾರ್ಕ್‌ನಲ್ಲಿ ರಾತ್ರಿ ಮದ್ಯ ಸೇವಿಸಿ ಅಲ್ಲಿಂದ ಬೆಳಿಗ್ಗೆ ನೆಲ್ಲಿಕಟ್ಟೆ ಪಾಲನ ಕೇಂದ್ರಕ್ಕೆ ಬಂದು ಮಲಗಿದ್ದೆ ಎಂದು ಆತ ಅಧಿಕಾರಿಗಳಿಗೆ ತಿಳಿಸಿದ್ದಾನೆ. ಆದರೆ ನನ್ನನ್ನು ಕೊವಿಡ್ ಕೇರ್ ಸೆಂಟರ್‌ಗೆ ದಾಖಲಿಸಿದರೆ ಅಲ್ಲಿಂದಲೂ ನಾನು ಓಡಿ ಹೋಗುವೆ ಎಂದು ಆತ ನಗರಸಭಾ ಸಿಬ್ಬಂದಿಗಳಿಗೆ ಬೆದರಿಕೆ ಹಾಕಿದ್ದಾನೆ ಎಂದೂ ತಿಳಿದು ಬಂದಿದೆ. ಪಾಸಿಟಿವ್ ಎಂದು ಗೊತ್ತಾದ ಮೇಲೂ ಆತ ಎರ್ರಾಬಿರ್ರಿ ಸುತ್ತಾಡಿದ್ದು, ಈ ಸಂದರ್ಭದಲ್ಲಿ ಆತನ ಪ್ರಾಥಮಿಕ ಸಂಪರ್ಕಕ್ಕೆ ಯಾರೆಲ್ಲ ಬಂದಿದ್ದಾರೆ ಎಂಬ ಬಗ್ಗೆ ಆರೋಗ್ಯ ಇಲಾಖೆ ಪರಿಶೀಲನೆ ನಡೆಸುತ್ತಿದೆ.