ಮಂಗಳೂರು/ಉಡುಪಿ: ಅರಬ್ಬೀ ಸಮುದ್ರದಲ್ಲಿ ತೌಕ್ತೆ ಚಂಡಮಾರುತದ ಪ್ರಭಾವದಿಂದ ಮಂಗಳೂರಿನಲ್ಲಿ ಜಡಿ ಮಳೆ ಸುರಿಯುತ್ತಿದೆ. ಜೊತೆಗೆ ಮಂಗಳೂರು ಹಾಗೂ ಉಡುಪಿಯ ತೀರದಲ್ಲಿ ಕಡಲ ಅಬ್ಬರ ಜೋರಾಗಿದೆ. ಕಡಲ ತಡಿಗೆ ದೈತ್ಯ ಅಲೆಗಳು ಅಪ್ಪಳಿಸುತ್ತಿವೆ.
ಮಂಗಳೂರು ಹೊರವಲಯದ ಉಳ್ಳಾಲ, ಕೋಟೆಪುರ, ಸೋಮೇಶ್ವರ ಹಾಗೂ ಕೈಕೊ ಪ್ರದೇಶದಲ್ಲಿ ಕಡಲ ಕೊರೆತದ ಆತಂಕ ಎದುರಾಗಿದೆ. ತೀರ ಪ್ರದೇಶದಲ್ಲಿ ಎಚ್ಚರಿಕೆಯಿಂದ ಇರುವಂತೆ ಈಗಾಗಲೇ ಜಿಲ್ಲಾಡಾಳಿತ ಸೂಚನೆ ಕೊಟ್ಟಿದೆ. ಹವಾಮಾನ ಇಲಾಖೆ, 2 ದಿನಗಳ ಕಾಲ ಮಂಗಳೂರಿನಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಒಂದೆಡೆ ಕೊರೊನಾ ಮಾಹಾಮಾರಿಯಾದ್ರೆ ಮತ್ತೊಂದೆಡೆ ತೌಕ್ತೆ ಚಂಡಮಾರುತದ ಸವಾಲು. ಅದನ್ನ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಎನ್ಡಿಆರ್ಎಫ್ ತಂಡವನ್ನ ಸನ್ನದ್ದ ಸ್ಥಿತಿಯಲ್ಲಿರಿಸಿದೆ.
ಉಡುಪಿಯ ಮರವಂತೆ ಸಮುದ್ರ ತೀರದಲ್ಲಿ ಭಾರೀ ಕಡಲ್ಕೊರೆತ ಉಂಟಾಗಿದ್ದು, ತೆಂಗಿನ ಮರಗಳು ಸಮುದ್ರದ ಪಾಲಾಗುತ್ತಿವೆ. ಮೇ 15, 16 ರಂದು ಜಿಲ್ಲೆಯಲ್ಲಿ ‘ರೆಡ್ ಅಲರ್ಟ್’ ಘೋಷಣೆ ಮಾಡಲಾಗಿದೆ. ಕೇರಳ, ತಮಿಳುನಾಡು ಜೊತೆಗೆ ಕರ್ನಾಟಕದ ಕರಾವಳಿ ಭಾಗದಲ್ಲಿ ಮುನ್ನೆಚ್ಚರಿಕೆ ನೀಡಲಾಗಿದೆ.
ಜಿಲ್ಲೆಯಲ್ಲಿ ಬೆಳಿಗ್ಗೆಯಿಂದಲೇ ಗಾಳಿ ಸಹಿತ ಮಳೆಯಾಗುತ್ತಿದೆ. ಮಧ್ಯಾಹ್ನದ ಬಳಿಕ ಗಾಳಿಯ ವೇಗ ಮತ್ತಷ್ಟು ಹೆಚ್ಚುವ ಭೀತಿ ಎದುರಾಗಿದೆ. ಮೀನುಗಾರರು ಕಡಲಿಗೆ ಇಳಿಯದಂತೆ ಎಚ್ಚರಿಕೆ ಸಂದೇಶ ರವಾನೆ ಮಾಡಲಾಗಿದೆ.