ಬೆಂಗಳೂರು: ಲಾಕ್ಡೌನ್ ಸಂದರ್ಭದಲ್ಲಿ ಹೊರಗೆ ಓಡಾಡಿದ ಜನರ ಮೇಲೆ ಲಾಠಿ ಬೀಸಿದ ಹಿನ್ನೆಲೆ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನ ಹೈಕೋರ್ಟ್ ಇಂದು ವಜಾ ಮಾಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವಕೀಲ ಬಾಲಕೃಷ್ಣನ್ ಅವರಿಗೆ ನ್ಯಾಯಾಲಯ 1 ಸಾವಿರ ರೂಪಾಯಿ ದಂಡ ವಿಧಿಸಿದೆ.
ಇದೇ ವೇಳೆ ಅರ್ಜಿದಾರರಿಗೆ ಚಾಟಿ ಬೀಸಿದ ಕೋರ್ಟ್, ಪೊಲೀಸರು ಬಾಯಿ ಮಾತಿನಲ್ಲಿ ಹೇಳಿದರೆ ಕೇಳುತ್ತಾರಾ? ನಮ್ಮ ಜನರು ಅಷ್ಟು ನಾಗರಿಕರಾಗಿದ್ದಾರಾ? ಎಂದು ಪ್ರಶ್ನಿಸಿತು. ಕೋವಿಡ್ ನಿಂದ ಎಷ್ಟು ಪೊಲೀಸರು ಸತ್ತಿದ್ದಾರೆ ತಿಳಿದಿದೆಯೇ? ಎಂದು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಹಾಗೂ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ , ಅರ್ಜಿದಾರರಿಗೆ ಪ್ರಶ್ನೆ ಹಾಕಿತು.
ಒಂದೆರಡು ಕಡೆ ಪೊಲೀಸರು ಚೌಕಟ್ಟು ಮೀರಿರಬಹುದು. ಅದಕ್ಕಾಗಿ ಎಲ್ಲಾ ಪೊಲೀಸರ ಮೇಲೆ ವಿಚಾರಣೆ ಸಾಧ್ಯವಿಲ್ಲ. ಆರೋಪಕ್ಕೆ ಪೂರಕವಾಗಿ ಯಾವುದೇ ದಾಖಲೆ ಒದಗಿಸಿಲ್ಲ. ಹಲ್ಲೆ ನಡೆಸಿದರೆ ಖಾಸಗಿ ದೂರು ದಾಖಲಿಸಬಹುದು ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು. ಕಡೆಗೆ 1 ಸಾವಿರ ರೂಪಾಯಿ ದಂಡ ವಿಧಿಸಿ ಪಿಐಎಲ್ ವಜಾ ಮಾಡಿತು.