ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಚಿವ ಎಸ್.ಅಂಗಾರ ಅವರ ನೇತೃತ್ವದಲ್ಲಿ ಶಾಸಕರ ನಿಯೋಗವು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿ ಮನವಿ ಸಲ್ಲಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕ್ರಮ, ಹೆಚ್ಚುವರಿ ಆರೋಗ್ಯಮಿತ್ರ ಕಾರ್ಯನಿರ್ವಾಹಕರನ್ನು ನೇಮಕ, ಕೋವಿಡ್ ಆರ್ ಟಿ ಪಿಸಿಆರ್ ಪರೀಕ್ಷೆ ಮಾಡಲು ಕೆವಿಜಿ ಮೆಡಿಕಲ್ ಕಾಲೇಜಿಗೆ ಅನುಮತಿ, ದಕ್ಷಿಣ ಕನ್ನಡ ಜಿಲ್ಲೆಗೆ ಆಕ್ಸಿಜನ್ ಟ್ಯಾಂಕರ್, 50 ಮತ್ತು 1 ಲಕ್ಷ ಪ್ರಮಾಣದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಸರಬರಾಜು ಮುಂತಾದ ಬೇಡಿಕೆಯನ್ನು ಈಡೇರಿಸಬೇಕೆಂದು ಮನವಿ ಸಲ್ಲಿಸಲಾಗಿದೆ. ಮಾತ್ರವಲ್ಲದೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಚಂಡಮಾರುತದಿಂದ ಅಪಾರ ಹಾನಿ ಸಂಭವಿಸಿದ್ದು, ಪ್ರಕೃತಿ ವಿಕೋಪ ನಿಧಿಯಿಂದ ರೂ.100 ಕೋಟಿಗಳನ್ನು ಮಂಜೂರು ಮಾಡುವಂತೆ ಹಾಗೂ ಗ್ರಾ.ಪಂ ಮತ್ತು ನಗರಾಡಳಿತ ಸಂಸ್ಥೆಯ ಸ್ಥಳೀಯಾಡಳಿತ ಪ್ರತಿನಿಧಿಗಳನ್ನು ಕೋವಿಡ್ ವಾರಿಯರ್ಸ್ ಎಂದು ಗುರುತಿಸುವಂತೆ ಮತ್ತು ಎಲ್ಲಾ ಸ್ಥಳೀಯಾಡಳಿತ ಜನಪ್ರತಿನಿಧಿಗಳಿಗೆ ಮೊದಲ ಹಂತದ ವ್ಯಾಕ್ಸಿನ್ ನೀಡುವಂತೆಯೂ ಮನವಿ ಸಲ್ಲಿಸಲಾಗಿದೆ.
ಈ ವೇಳೆ ಕೊರೋನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬಂದು ಸರ್ವರಿಗೆ ಸುಖ, ಆರೋಗ್ಯ,ಸಮೃದ್ಧಿ ಕರುಣಿಸಲೆಂದು ಶ್ರೀ ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ನಡೆಸಲಾದ ಧನ್ವಂತರಿ ಹೋಮ, ಕ್ರಿಮಿಹಾರ ಸೂಕ್ತ ಹೋಮ, ಚಂಡಿಕಾ ಯಾಗ, ಶ್ರೀ ಸುಬ್ರಹ್ಮಣ್ಯ ದೇವರ ಪ್ರಸಾದವನ್ನು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ರವರಿಗೆ ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಯವರು ನೀಡಿದರು. ಈ ಸಂದರ್ಭದಲ್ಲಿ ಮೀನುಗಾರಿಕಾ ಸಚಿವರಾದ ಅಂಗಾರ, ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಮತ್ತು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಪಸ್ಥಿತರಿದ್ದರು.