ಮಾಸ್ಕ್ ಧರಿಸಲು ಹೇಳಿದ್ದಕ್ಕೆ ಮಲ್ಲೂರು ಗ್ರಾಮ ಪಂಚಾಯಿತಿಯ ಸಾರ್ವಜನಿಕ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗೆ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮೊಹಮ್ಮದ್ ಇರಾಯತುಲ್ಲಾ(25), ಫರಂಗಿಪೇಟೆ ನಿವಾಸಿ ಅಹ್ಮದ್ ಬಸೀರ್(30), ಕುತ್ತಾರ್ ನಿವಾಸಿ ಅಬೂಬಕ್ಕರ್ ಸಿದ್ದಿಕೂರ್(26), ಅಬ್ದುಲ್ ಸಿದ್ದಿಕ್ (33) ಎಂದು ಗುರುತಿಸಲಾಗಿದೆ.ಇನ್ನು ಓರ್ವ ಆರೋಪಿ ಮನ್ಸೂರ್ ಅಲಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಮೇ 25ರ ಮಂಗಳವಾರ ಪಿಡಿಒ ರಾಜೇಂದ್ರ ಶೆಟ್ಟಿ ಅವರು ಗ್ರಾಮ ಪಂಚಾಯಿತಿ ಕಚೇರಿಯ ಸಮೀಪದಲ್ಲಿದ್ದ ಐದು ಮಂದಿ ಯುವಕರಿಗೆ ಮಾಸ್ಕ್ ಧರಿಸಿ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಕೇಳಿದ್ದರು. ಆದರೆ ಆ ಯುವಕರ ತಂಡ ಆಕ್ಷೇಪ ವ್ಯಕ್ತಪಡಿಸಿ ಪಿಡಿಒ ಮೇಲೆ ಹಲ್ಲೆ ನಡೆಸಿದ್ದಾರೆ.
ಆರೋಪಿ ಮಹಮ್ಮದ್ ಇದಾಯತುಲ್ಲಾ ಮತ್ತು ಅಹ್ಮದ್ ಬಸೀರ್ ವಿರುದ್ಧ ಈಗಾಗಲೇ ಮಂಗಳೂರು ಗ್ರಾಮಾಂತರ ಠಾಣೆ ಮತ್ತು ಮಂಗಳೂರು ಉತ್ತರ ಪೊಲೀಸ್ ಠಾಣೆ, ಮಂಗಳೂರು ದಕ್ಷಿಣ ಠಾಣೆಯಲ್ಲಿ ಅನೇಕ ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.