ವಿಟ್ಲ : ಕೆಲ ದಿನಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಸಾವಿನಲ್ಲಿ ಸಂಶಯ ಇರುವುದಾಗಿ ಅವರ ಸಹೋದರ ನೀಡಿದ ದೂರಿನ ಮೇರೆಗೆ ದಫನ ಮಾಡಿದ ಮೃತದೇಹವನ್ನು ಮೇಲಕ್ಕೆತ್ತಿ ಮರು ತನಿಖೆ ಮಾಡಲು ಪೊಲೀಸರು ಮುಂದಾದ ಘಟನೆ ಬಗ್ಗೆ ವರದಿಯಾಗಿದೆ.
ಕನ್ಯಾನ ಬಳಿಯ ಸುಂಕದಕಟ್ಟೆ ಮಜೀರ್ಪಳ ನಿವಾಸಿ ಅಶ್ರಫ್ ಮೇ.6 ರಂದು ಮೃತಪಟ್ಟಿದ್ದು, ಕನ್ಯಾನ ಬಂಡಿತ್ತಡ್ಕದ ರಹ್ಮಾನಿಯಾ ಜುಮ್ಮಾ ಮಸೀದಿಯಲ್ಲಿ ದಫನ ನಡೆಸಲಾಗಿತ್ತು.
ಅಶ್ರಫ್ ರದ್ದು ಸಹಜ ಸಾವಲ್ಲ, ಸಾವಿನಲ್ಲಿ ಸಂಶಯವಿದೆ ಎಂದು ಆರೋಪಿಸಿ ಸಹೋದರ ಇಬ್ರಾಹಿಂ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದು, ವಿಟ್ಲ ಹಾಗೂ ಮಂಜೇಶ್ವರ ಪೊಲೀಸರು ಜಂಟಿಯಾಗಿ ತನಿಖೆ ನಡೆಸಲು ಮುಂದಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಮಂಜೇಶ್ವರ ಪೊಲೀಸರು, ದಫನಗೊಂಡ ದೇಹವನ್ನು ಮೇಲಕ್ಕೆತ್ತಿ ಶವ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶ ಪಡೆದು ಮಂಜೇಶ್ವರ ಪೊಲೀಸರು ರಹ್ಮಾನಿಯಾ ಜುಮ್ಮಾ ಮಸೀದಿಗೆ ಆಗಮಿಸಿದ್ದು, ಮಂಗಳೂರಿನ ಯೆನೋಪೊಯ ಆಸ್ಪತ್ರೆಯ ಫಾರೆನ್ಸಿಕ್ ವಿಭಾಗದ ಸಿಬ್ಬಂದಿಗಳು, ಕಾಸರಗೋಡು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತನಿಖೆಗೆ ನೆರವು ನೀಡಲಿದ್ದಾರೆ. ಬಂಟ್ವಾಳ ತಹಶೀಲ್ದಾರ್ ಕೂಡ ಸ್ಥಳದಲ್ಲಿ ಉಪಸ್ಥಿತರಿದ್ದಾರೆ ಎಂದು ವರದಿಯಾಗಿದೆ.
ಅಶ್ರಫ್ ಮನೆ ಸಮೀಪ ಗೂಡಂಗಡಿ ನಡೆಸುತ್ತಿದ್ದು, ಮೇ.5 ರಂದು ರಾತ್ರಿ ಗೂಡಂಗಡಿ ಮುಚ್ಚಿದ ಬಳಿಕ, ಮನೆಗೆ ತೆರಳಿ ನಿದ್ರಿಸಿದ್ದರು. ಮೇ.6 ರಂದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಪತ್ನಿ ಮಾಹಿತಿ ನೀಡಿದ್ದರು. ಸಹೋದರನ ಸಾವಿನಲ್ಲಿ ಸಂಶಯವಿದೆ ಎಂದು ಇಬ್ರಾಹಿಂ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.