ಸುಬ್ರಹ್ಮಣ್ಯ: ಇಲ್ಲಿನ ಕುಮಾರಧಾರ ನದಿಯಲ್ಲಿ ಇಂದು ಬೆಳಿಗ್ಗೆ ವೃದ್ಧರೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತರನ್ನು ತುರುವೇಕೆರೆ ಮೂಲದ ದೇವೇಗೌಡ (80) ಎಂದು ಗುರುತಿಸಲಾಗಿದೆ.
ಸುಬ್ರಹ್ಮಣ್ಯ ಕುಲ್ಕುಂದ ಕಾಲನಿ ರಸ್ತೆಯಿಂದ ಕುಮಾರಧಾರ ನದಿಗೆ ಸೇರುವ ಸಮೀಪದ ಪ್ರದೇಶದಲ್ಲಿ ಗಂಡಸಿನ ಮೃತದೇಹ ಪತ್ತೆಯಾಗಿತ್ತು. ಪರಿಶೀಲನೆ ನಡೆಸಿದಾಗ, ತುರುವೇಕೆರೆಯಿಂದ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸರ್ಪಸಂಸ್ಕಾರ ಸೇವೆಗಾಗಿ ಬಂದಿದ್ದ ಯಾತ್ರಾರ್ಥಿಗಳ ತಂಡದಲ್ಲಿದ್ದ ದೇವೇಗೌಡ ಅವರ ಮೃತದೇಹವೆಂದು ತಿಳಿದುಬಂದಿದೆ.
ಅನಾರೋಗ್ಯದ ಕಾರಣ ದೇವೇಗೌಡ ಅವರು ವಸತಿಗೃಹದಲ್ಲೇ ಉಳಿದುಕೊಂಡಿದ್ದರು ಎನ್ನಲಾಗಿದೆ. ಇತ್ತ ಅವರು ಕಾಣೆಯಾಗಿರುವುದಾಗಿ ಕುಟುಂಬಸ್ಥರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಸಂದರ್ಭದಲ್ಲಿ, ನದಿಯಲ್ಲಿ ಪತ್ತೆಯಾದ ಮೃತದೇಹ ಅವರದ್ದೇ ಎಂಬುದು ದೃಢಪಟ್ಟಿದೆ.
ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



























