ವಿಟ್ಲ: ಕಳೆದ 53 ವರ್ಷಗಳಲ್ಲಿ ರೈತಾಪಿ ವರ್ಗದ ಆಶೋತ್ತರಗಳಿಗೆ ಪೂರಕವಾಗಿ ಸ್ಪಂದಿಸುತ್ತಿರುವ ಇಫ್ಕೋ ಸಹಕಾರಿ ಸಂಸ್ಥೆ ರಾಷ್ಟಮಟ್ಟದಲ್ಲಿ ಕೊಡುವ ‘ಇಫ್ಕೋ ಸಹಕಾರಿ ಸಿಂಧು’ ರಾಷ್ಟಮಟ್ಟದ ಪ್ರಶಸ್ತಿ ಈ ಬಾರಿ ಹಿರಿಯ ಸಹಕಾರಿಯೆನಿಸಿದ ಎಸ್.ಆರ್.ರಂಗಮೂರ್ತಿಯವರಿಗೆ ಸಂದಿರುವುದು ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯೆನಿಸಿದೆ.ಹತ್ತು ವರ್ಷಗಳ ಬಳಿಕ ಕನ್ನಡಿಗ ಸಹಕಾರಿ ಕ್ಷೇತ್ರದ ಸಾಧಕರೊಬ್ಬರು ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಇಫ್ಕೋ ಫರ್ಟಿಲೈಸರ್ಸ್ ಕಂಪೆನಿಯ ಕರ್ನಾಟಕ ಪ್ರಾಂತೀಯ ಅಧಿಕಾರಿ ಡಾ. ನಾರಾಯಣ ಸ್ವಾಮಿ ಹೇಳಿದರು.
ಅವರು ಇಂದು ಇಫ್ಕೋ ಸಂಸ್ಥೆಯ ವತಿಯಿಂದ ದೇಶದ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ವಿಶ್ರಾಂತ ಜೀವನ ನಡೆಸುತ್ತಿರುವ ಹಿರಿಯ ಸಹಕಾರಿಗಳಿಗೆ ನೀಡಲ್ಪಡುವ ರಾಷ್ಟ್ರೀಯ ಮಟ್ಟದ ಸಹಕಾರಿ ಸಿಂಧು ಪ್ರಶಸ್ತಿಯನ್ನು ವರ್ಚುವಲ್ ಮೂಲಕ ಪ್ರದಾನಗೊಳಿಸಿದ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದರು.
ಇಫ್ಕೋ ಒಂದು ರೈತರ ಸಹಕಾರ ಸಂಸ್ಥೆಯಾಗಿದೆ. ಇದರ ಮಾಲಕರೇ ರೈತರಾಗಿದ್ದಾರೆ. ಇದು ರೈತರಿಂದ ರೈತರಿಗಾಗಿ ರೈತರಿಗೋಸ್ಕರ ಇರುವ ಸಹಕಾರಿಯಾಗಿದೆ. ಸುಮಾರು 53 ವರುಷಗಳ ಹಿಂದೆ 57 ಸಹಕಾರ ಸಂಘಗಳು ಸೇರಿಕೊಂಡು ಹುಟ್ಟು ಹಾಕಿದ ಸಹಕಾರಿಯಾಗಿದೆ. ರೈತರ ಸಹಕಾರದಿಂದಲೇ ಈ ಸಹಕಾರಿ ಇಷ್ಟೊಂದು ದೊಡ್ಡದಾಗಿ ಬೆಳೆಯಲು ಸಹಕಾರಿಯಾಗಿದೆ. ಇಫ್ಕೋ ಪ್ರಪಂಚದಲ್ಲಿಯೇ ಅತೀ ದೊಡ್ಡ ಸಹಕಾರಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಸಾಮಾಜಿಕ ಕಾರ್ಯಕರ್ತ, ರೈ ಎಸ್ಟೇಟ್‌ನ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಮಾತನಾಡಿ ಯಾವುದೇ ಪ್ರಚಾರಗಳಿಲ್ಲದೇ ಸಹಕಾರಿ ಕ್ಷೇತ್ರ ಹಾಗೂ ಸಮಾಜದ ಹಲವು ಕ್ಷೇತ್ರಗಳಲ್ಲಿ ಸೇವೆ ಮಾಡಿದ ಎಸ್.ಆರ್. ರಂಗಮೂರ್ತಿಯವರು ಈ ಮೌಲ್ಯಯುತ ಪ್ರಶಸ್ತಿಗೆ ಅರ್ಹವಾದ ವ್ಯಕ್ತಿಯಾಗಿದ್ದಾರೆ. ನಾವು ಮಾಡುವ ಕೆಲಸದಲ್ಲಿ ಅಪೇಕ್ಷೆ ಪಡಬಾರದು ಎಲ್ಲರನ್ನು ಒಟ್ಟಿಗೆ ಸೇರಿಸಿಕೊಂಡು ಕೆಲಸ ಮಾಡಬೇಕು ಎನ್ನುವುದು ಅವರ ಆಶಯವಾಗಿದೆ. ಅವರಿಂದ ಈ ಭಾಗದ ಜನರಿಗೆ ಹಲವಾರು ಸಹಾಯಗಳು ಆಗಿದೆ. ಆದ್ದರಿಂದ ಅವರಿಗೆ ಈ ಪ್ರಶಸ್ತಿ ಲಭಿಸಿರುವುದು ತುಂಬಾ ಸಂತಸ ತಂದಿದೆ ಎಂದರು.
ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲುರವರು ಮಾತನಾಡಿ ನಾಲ್ಕು ದಶಕಗಳಿಂದ ರಂಗಮೂರ್ತಿಯವರು ಮೌನವಾಗಿ ಮಾಡಿದ ಮಾನವ ಸೇವೆಗೆ ಪ್ರಶಸ್ತಿಗಳು ಅರಸಿಕೊಂಡು ಬರುತ್ತಿವೆ. ಪುಣಚವೆಂಬ ಪುಟ್ಟ ಗ್ರಾಮ ರಾಷ್ಟಮಟ್ಟದಲ್ಲಿ ಈ ಮೂಲಕ ಗುರುತಿಸಲ್ಪಡುತ್ತಿದೆ. ಇದೀಗ ಅವರಿಗೆ, ಅವರ ಮನೆಯವರಿಗೆ ಸಿಕ್ಕಿದ ಗೌರವ ಇಡೀ ಪುಣಚ ಗ್ರಾಮಕ್ಕೆ ಸಂದ ಗೌರವವಾಗಿದೆ ಎಂದು ಅವರು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಸ್.ಆರ್. ರಂಗಮೂರ್ತಿ ಬದುಕಿನಲ್ಲಿ ಯಾವುದೇ ಪ್ರಶಸ್ತಿಗಳ ನಿರೀಕ್ಷೆ ಮಾಡಿಲ್ಲ. ಆದರೆ ಸರ್ವ ಸಮ್ಮತವಾದ ತೀರ್ಮಾನಕ್ಕೆ ಬದ್ಧನಾಗಿ ಪ್ರಶಸ್ತಿ ಸ್ವೀಕರಿಸುತ್ತಿದ್ದೇನೆ. ಸಹಕಾರಿ ಕ್ಷೇತ್ರ ಬಿಟ್ಟು ಸುಮಾರು ಹತ್ತು ವರುಷಗಳು ಆಯಿತು. ಸಂಘಟನೆಯ ಜೊತೆಗೆ ನನಗೆ ಸಹಕಾರಿಯ ನಂಟು ಬೆಳೆಯಿತು. ಪ್ರತಿಷ್ಠಿತ ಕ್ಯಾಂಪ್ಕೋದಲ್ಲಿಯೂ ನನಗೆ ಕೆಲಸ ಮಾಡುವ ಅವಕಾಶ ದೊರೆಯಿತು. ಈ ಪ್ರಶಸ್ತಿ ನನ್ನ ಸಂಘಟನೆಗೆ, ಸಮಾಜಕ್ಕೆ ಸಿಕ್ಕಿದ ಗೌರವವಾಗಿದೆ ಎಂದರು.
11 ಲಕ್ಷ ರೂ.ನಗದು, ರಜತ ತಟ್ಟೆ, ರೇಷ್ಮೆಶಾಲು, ಪ್ರಶಸ್ತಿ ಪತ್ರವನ್ನು ಇಫ್ಕೋ ಸಂಸ್ಥೆಯ ಅಧಿಕಾರಿ ಡಾ. ನಾರಾಯಣ ಸ್ವಾಮಿರವರು ಎಸ್. ಆರ್. ರಂಗಮೂರ್ತಿಯವರಿಗೆ ಹಸ್ತಾಂತರಿಸಿದರು. ಕ್ಯಾಂಪ್ಕೋ ನಿಕಟಪೂರ್ವ ಅಧ್ಯಕ್ಷ, ಎಸ್.ಆರ್.ಸತೀಶ್ಚಂದ್ರ ಸ್ವಾಗತಿಸಿದರು. ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದೇವಿಪ್ರಸಾದ್ ಕಲ್ಲಾಜೆ ವಂದಿಸಿದರು. ಪ್ರಗತಿಪರ ಕೃಷಿಕ ಜಯಶ್ಯಾಂ ನೀರ್ಕಜೆ ಸಹಕರಿಸಿದರು.