ಬೆಳ್ತಂಗಡಿ : ಎರಡು ವ್ಯಕ್ತಿಗಳ ನಡುವೆ ಹಲವು ವರ್ಷಗಳಿಂದ ನಡೆಯುತ್ತಿದ್ದ ಜಾಗದ ತಕರಾರು ಸಂಬಂಧ ಇದೀಗ ಜಾಗವನ್ನು ಪ್ರವೇಶಿಸುವ ಗೇಟಿನ ಮುಂದೆ 25 ಮೇಕೆಯ ತಲೆ ಕಡಿದು ಅದಕ್ಕೆ 25 ಮಂದಿಯ ಪೋಟೋ ಇಟ್ಟು ವಾಮಾಚಾರ ಮಾಡಿದ ಘಟನೆ ಬೆಳ್ತಂಗಡಿಯಲ್ಲಿ ಬೆಳಕಿಗೆ ಬಂದಿದೆ.

ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಬೋಳಿಯಾರ್ ಎಂಬಲ್ಲಿ 25 ಎಕರೆ ಜಾಗವನ್ನು ಕೇರಳ ಮೂಲದ ಗೋಪಾ ಕುಮಾರ್ ಮತ್ತು ಸುಮೇಶ್ ಎಂಬವರಿಂದ ಕಳೆದ ವರ್ಷ ಮಂಗಳೂರಿನ ವ್ಯಕ್ತಿ ಖರೀದಿ ಮಾಡಿಕೊಂಡು ದಾಖಲೆ ಪತ್ರ ವರ್ಗಾವಣೆ ಮಾಡಿಸಿ ಜಾಗದ 8 ಕೋಟಿ ರೂಪಾಯಿ ಹಣ ನೀಡದೆ ಮೋಸ ಮಾಡಿದ್ದ. ಈ ಬಗ್ಗೆ ಹಲವು ಸಮಯದವರೆಗೆ ಗಲಾಟೆ ನಡೆಯುತ್ತಿತ್ತು. ನಂತರ ಮಾರಾಟ ಮಾಡಿದ ಜಾಗದ ಮಾಲಕರಾದ ಗೋಪಾ ಕುಮಾರ್ ಮತ್ತು ಸುಮೇಶ್ ಸೇರಿ ಬೆಳ್ತಂಗಡಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಈ ಬಗ್ಗೆ ಬೆಳ್ತಂಗಡಿ ಕೋರ್ಟ್ ನಲ್ಲಿ ಹಣ ನೀಡದೆ ಮೋಸ ಮಾಡಿದ ಬಗ್ಗೆ ದಾಖಲೆಗಳ ಮೂಲಕ ತಿಳಿದಿದ್ದು, ಜಾಗವನ್ನು ಮೂರನೇ ವ್ಯಕ್ತಿಗೆ ಮಾರಾಟ ಮಾಡಬಾರದು ಮತ್ತು ಹಿಂದಿನ ಮೂಲ ಜಾಗದ ಮಾಲಕರಾದ ಗೋಪಾ ಕುಮಾರ್ ಮತ್ತು ಸುಮೇಶ್ ವಶಕ್ಕೆ ಬೆಳ್ತಂಗಡಿ ಕೋರ್ಟ್ ನೀಡಿತ್ತು.
ಇದೀಗ ಜಾಗಕ್ಕೆ ಪ್ರವೇಶ ಮಾಡುವ ಗೇಟಿನ ಮುಂದೆ ಜೂ.9 ರಂದು ರಾತ್ರಿ 25 ಮೇಕೆಯ ತಲೆ ಕಡಿದು ಅದಕ್ಕೆ 25 ಮಂದಿಯ ಫೋಟೋಗಳನ್ನು ಇಟ್ಟು ಜಾಗ ಖರೀದಿ ಮಾಡಿ ಹಣ ಮೋಸ ಮಾಡಿದ್ದ ಮಂಗಳೂರಿನ ಪ್ರಭಾವಿ ವ್ಯಕ್ತಿ ವಾಮಾಚಾರ ಮಾಡಿದ್ದಾನೆ ಎಂದು ಆರೋಪ ಕೇಳಿಬರುತ್ತಿದೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದು ಮಾಹಿತಿ ಕಲೆ ಹಾಕುತ್ತಿದ್ದಾರೆ.
