ಪುತ್ತೂರು: ಪುತ್ತೂರು ವಿಟ್ಲ ಸೇರಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 51 ಎಕ್ರೆ ಹಡಿಲು ಭೂಮಿಯಲ್ಲಿ ಭತ್ತದ ಕೃಷಿ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜೂ.4ರಂದು ಬೆಳಿಗ್ಗೆ ಪುತ್ತೂರಿಗೆ ಭೇಟಿ ನೀಡಿದ ಅವರು ತಾ.ಪಂ ಕಿರು ಸಭಾಂಗಣದಲ್ಲಿ ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಹಡಿಲು ಬಿದ್ದ ಭೂಮಿಯ ವರದಿ ಪಡೆದು ಸೂಚನೆ ನೀಡಿದರು. ಹಡಿಲು ಬಿದ್ದ ಭೂಮಿಯಲ್ಲಿ ಯಾಂತ್ರಿಕೃತವಾಗಿ ನಾವು, ನೀವು ಮಾತನಾಡಿದ ಹಾಗೆ ಕೆಲಸ ಆಗುವುದಿಲ್ಲ. ಜನರ ಮತ್ತು ಸಂಘ ಸಂಸ್ಥೆಗಳ ಸಹಕಾರದಿಂದ ಭತ್ತದ ಬೇಸಾಯ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕೃಷಿ ಸಹಾಯಕ ಜಂಟಿ ನಿರ್ದೇಶಕಿ ಸೀತಾ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.