ಕೊರೊನಾ ಸೋಂಕಿನಿಂದಾಗಿ ಅರ್ಚಕ ವರ್ಗಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಕಾರಣ ಸರಕಾರದಿಂದ ತಸ್ತಿಕ್ ಭತ್ತೆ ನೀಡಲು ಆದೇಶಿಸಿರುವುದು ಸ್ವಾಗತಾರ್ಹ ಆದರೆ ಅದೇ ಆದೇಶದ ಪ್ರಕಾರ ತಸ್ತಿಕ್ ಹಣವನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ 41 ಮಸೀದಿ, ಮದರಸದ ಮೌಲ್ವಿಗಳಿಗೆ ನೀಡಲು ನಿರ್ಧಾರ ಮಾಡಿರುವುದು ಖಂಡನೀಯ ಎಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ ಹೇಳಿದ್ದಾರೆ.
ದೇವಸ್ಥಾನ ಹಣವನ್ನು ಮಸೀದಿಗೆ ನೀಡುವುದು ಖಂಡನೀಯವಾಗಿದೆ, ಇದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುತ್ತದೆ. ದೇವಸ್ಥಾನ, ದೈವಸ್ಥಾನಗಳ ಹಣವನ್ನು ಹಿಂದೂಗಳಿಗೆ ಮತ್ತು ದೇವಸ್ಥಾನದ ಕಾರ್ಯಗಳಿಗೆ ಮಾತ್ರ ಉಪಯೋಗಿಸಬೇಕು ವಿನಹ ಮಸೀದಿ, ಮದರಸಗಳಿಗೆ ಉಪಯೋಗಿಸುವುದನ್ನು ಹಿಂದೂ ಜಾಗರಣ ವೇದಿಕೆ ಖಂಡಿಸುತ್ತದೆ, ತಕ್ಷಣವೇ ಈ ಆದೇಶವನ್ನು ರದ್ದು ಪಡಿಸಬೇಕು ಎಂದು ಹಿಂ.ಜಾ. ವೇ ಆಗ್ರಹಿಸುತ್ತದೆ ಎಂದು ಹೇಳಿದರು.