ಕುಂದಾಪುರ : ಶನಿವಾರ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ತಡ ರಾತ್ರಿಯೇ ಪ್ರಮುಖ ಆರೋಪಿ ಎಡಮೊಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳನ್ನು ಮಧ್ಯರಾತ್ರಿಯೇ ಬಂಧಿಸಲಾಗಿತ್ತು. ಸೋಮವಾರ ಬೆಳಿಗ್ಗೆ ಇನ್ನೋರ್ವ ಆರೋಪಿ ಸಂಘಟನೆ ಮುಖಂಡ ಬಾಲಚಂದ್ರ ಭಟ್ ಹಾಗೂ ರಾಜೇಶ್ ಭಟ್ ಎಂಬಾತನನ್ನು ಬಂಧಿಸಲಾಗಿದ್ದು ಮೂವರೂ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬುಧವಾರ ಶಂಕರನಾರಾಯಣ ಪೊಲೀಸರು ಯಡಮೊಗೆ ನಿವಾಸಿ ಮನೋಜ್ ಕುಮಾರ್(26), ಎಡಮೊಗ್ಗೆ ಗ್ರಾಮ ಪಂಚಾಯತ್ ಸದಸ್ಯ ಸದಾಶಿವ ನಾಯ್ಕ್ ಹಾಗೂ ಸ್ಥಳೀಯ ನಿವಾಸಿ ವೇಣುಗೋಪಾಲ ಶೆಟ್ಟಿ ಎಂಬಾತನನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಂಧಿತರಿಗೆ ಜೂನ್ 29ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.
ಶನಿವಾರ ರಾತ್ರಿ ಪ್ರಾಣೇಶ್ ಯಡಿಯಾಳ್ ಹಾಗೂ ಆತನ ತಂಡ ಉದಯ್ ಗಾಣಿಗ ಅವರ ಮೈಮೇಲೆ ಕಾರು ಹತ್ತಿಸಿ ಆ ಬಳಿಕ ದೊಣ್ಣೆಯಿಂದ ಹೊಡೆದು ಕೊಲೆಗಯ್ಯಲಾಗಿದೆ ಎಂದು ಉದಯ್ ಪತ್ನಿ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಈಗ ಪ್ರಕರಣಕ್ಕೆ ತಿರುವು ದೊರಕಿದ್ದು, ಮೊದಲು ಪ್ರಾಣೇಶ್ ಯಡಿಯಾಳ್ ಹಾಗೂ ಆತನ ತಂಡ ಉದಯ ಗಾಣಿಗನನ್ನು ಉಪಾಯವಾಗಿ ಕರೆಯಿಸಿ ಸುತ್ತುವರಿದು ಮರದ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಆದರೂ ಹೊಡೆತಕ್ಕೆ ಉದಯ ಗಾಣಿಗ ಜಗ್ಗದಿದ್ದಾಗ ಕಾರಿನಲ್ಲಿ ಕುಳಿತಿದ್ದ ಅಪ್ರಾಪ್ತ ಪ್ರಾಯದ ಪ್ರಾಣೇಶ ಯಡಿಯಾಳನ ಪುತ್ರ ಉದಯ ಗಾಣಿಗನ ಮೇಲೆ ಕಾರು ಚಲಾಯಿಸಿದ್ದಾನೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಕಾರು ಚಲಾಯಿಸಿ ಅಪ್ರಾಪ್ತ ಆರೋಪಿಯನ್ನು ನಾಪತ್ತೆ ಮಾಡಲಾಗಿದ್ದು, ಆತನ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ.
ಪ್ರಕರಣದ ಆರೋಪಿಗಳಿಗೆ ರಕ್ಷಣೆ ನೀಡಿದ ಆರೋಪದಲ್ಲಿ ಬಿಜೆಪಿಯ ಜಿಲ್ಲಾ ನಾಯಕನ ಸಹಿತ ಪ್ರಮುಖ ಆರೋಪಿಯ ಪುತ್ರನನ್ನು ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.