ಪುತ್ತೂರು : ಪೆಟ್ರೋಲ್ ನ ಮೂಲ ಬೆಲೆ 33 ರೂಪಾಯಿ ಆಗಿದ್ದು ಇದಕ್ಕೆ 60 ರೂಪಾಯಿಗಿಂತಲೂ ಹೆಚ್ಚು ತೆರಿಗೆಗಳನ್ನು ಹಾಕಿ ಕೇಂದ್ರ ಮತ್ತು ರಾಜ್ಯ ಸರಕಾರ ಜನರ ಹಣವನ್ನು ದರೋಡೆಗೈಯುತ್ತಿದೆ ಎಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಅಲಿ ಆರೋಪಿಸಿದ್ದಾರೆ.ಅವರು ನೆಹರು ನಗರದ ಸಂಜೀವಿನಿ ಪೆಟ್ರೋಲ್ ಬಂಕ್ ನಲ್ಲಿ ಕಾಂಗ್ರೆಸ್ ನ ಎನ್.ಎಸ್.ಯು.ಐ ಘಟಕ ಆಯೋಜಿಸಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಭಾರತದಿಂದ ಕೊಂಡು ಹೋದ ಪೆಟ್ರೋಲ್ ಅನ್ನು ಶ್ರೀಲಂಕಾ ಸರಕಾರ ಲೀಟರ್ ಗೆ 60 ರೂಪಾಯಿಯಂತೆ ಜನರಿಗೆ ನೀಡುತ್ತಿದೆ. ಪಕ್ಕದ ಪಾಕಿಸ್ತಾನ ತನ್ನ ದೇಶದ ಜನರಿಗೆ 56 ರೂಪಾಯಿ ಬೆಲೆಗೆ ಪೆಟ್ರೋಲ್ ನೀಡುತ್ತಿದೆ ಆದರೆ ಕೇಂದ್ರ ಸರಕಾರ ದುಪ್ಪಟ್ಟು ತೆರಿಗೆ ವಿಧಿಸಿ ನಮ್ಮ ದೇಶದ ಜನರಿಗೆ 100 ರೂಪಾಯಿ ಬೆಲೆಗೆ ಪೆಟ್ರೋಲ್ ಮಾರಿ ಅನ್ಯಾಯ ಮಾಡುತ್ತಿದೆ. ವಿಶ್ವಗುರು ಎಂದು ತನ್ನನ್ನು ತಾನೇ ಬಿಂಬಿಸಿಕೊಳ್ಳುತ್ತಿರುವ ಪ್ರಧಾನಿ ಮೋದಿ ಎಲ್ಲಾ ಅಗತ್ಯ ವಸ್ತುಗಳಿಗೆ ವಿಪರೀತ ಬೆಲೆ ಏರಿಸಿ ಈ ದೇಶದಲ್ಲಿ ಶ್ರೀಮಂತರು ಮಾತ್ರ ಬದುಕ ಬೇಕು, ಬಡವರು ಬದುಕಲೇ ಬಾರದೆಂಬ ನಿಲುವು ತಳೆದಿದ್ದಾರೆ ಎಂದರು.
ತೈಲ ಬೆಲೆ ಏರಿರುವುದರಿಂದ ಕಾರ್ ಹಾಗೂ ದೊಡ್ಡ ದೊಡ್ಡ ವಾಹನಗಳಿರುವ ಶ್ರೀಮಂತರಿಗೆ ಮಾತ್ರ, ತೊಂದರೆ ನಮಗೇನು ತೊಂದರೆ ಇಲ್ಲಾ ಎಂದು ಜನಸಾಮಾನ್ಯರು ಭಾವಿಸಿರಬಹುದು, ಪೆಟ್ರೋಲ್ ಮತ್ತು ಡಿಸೇಲ್ ಗೆ ಬೆಲೆ ಏರಿದರೆ ಸಾಗಾಟವೆಚ್ಚ ದುಬಾರಿಯಾಗಿ ದಿನನಿತ್ಯ ಉಪಯೋಗಿಸುತ್ತಿರುವ ಆಹಾರ ಧಾನ್ಯಗಳು , ಹಣ್ಣು ಹಂಪಲು, ತರಕಾರಿ ಮೊದಲಾದವುಗಳಿಗೆ ಬೆಲೆ ಜಾಸ್ತಿ ಆಗುತ್ತದೆ ಇದರಿಂದ ಜನಸಾಮಾನ್ಯರಿಗೆ ಹಾಗೂ ಬಡವರಿಗೆ ಜೀವಿಸಲು ಕಷ್ಟ ಆಗುತ್ತದೆ ಎಂದೇ ಕಾಂಗ್ರೆಸ್ ಪಕ್ಷ ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದೆ ಎಂದು ಹೇಳಿದರು.
ಪುರಸಭೆಯ ಮಾಜಿ ಉಪಾಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಸಂತೋಷ ಭಂಡಾರಿ ಚಿಲ್ಮೆತಾರು, ಎನ್.ಎಸ್.ಯು.ಐ ಪುತ್ತೂರು ಅಧ್ಯಕ್ಷ ಕೌಶಿಕ್ ಗೌಡ, ಮೊದಲಾದವರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಪ್ರತಿಭಟನೆ ಆಯೋಜಿಸಿರುವ ಎನ್.ಎಸ್.ಯು.ಐ ನ ಪುತ್ತೂರು ಉಸ್ತುವಾರಿ ಬಾತೀಶ ಅಳಕೆಮಜಲು, ತಮೀಜ್ ಕೋಲ್ಫೆ , ನಗರಸಭಾ ಸದಸ್ಯ ರಿಯಾಜ್ ಪರ್ಲಡ್ಕ, ಪುತ್ತೂರು ಯಂಗ್ ಬ್ರಿಗೇಡ್ ನ ಅಧ್ಯಕ್ಷ ರಂಜಿತ್ ಬಂಗೇರ, ಪದಾಧಿಕಾರಿಗಳಾದ ಅಭಿಷೇಕ್ ಬೆಳ್ಳಿಪ್ಪಾಡಿ, ಶೆರೀಫ್ ಬಲ್ನಾಡ್, ಪ್ರಹ್ಲಾದ್ ಬೆಳ್ಳಿಪ್ಪಾಡಿ, ವಿಶಾಖ್ ಭಟ್, ಕೇಶವ ಪಡೀಲ್, ಮಾಜಿ ನಗರ ಸಭಾ ಸದಸ್ಯ ಅನ್ವರ್ ಖಾಸಿಂ, ಎನ್.ಎಸ್.ಯು.ಐ ನ ಫಾರೂಕ್ ಬಯಬೆ. ಜಾಬೀರ್ ಸಾಲ್ಮರ, ಶಕೀಲ್ ಪೋಲ್ಯ, ರಶೀದ್ ಮುರ, ಸಿದ್ದೀಕ್ ಸುಲ್ತಾನ್ ಕೂಡುರಸ್ತೆ , ಮೋನು ಬಪ್ಪಳಿಗೆ, ಹಂಝತ್ ಸಾಲ್ಮರ, ಮೊದಲಾದವರು ಭಾಗವಹಿಸಿದ್ದರು.