ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅಂತಾರಾಷ್ಟ್ರೀಯ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಿ ವರ್ಷವೂ ಆಗಿಲ್ಲ. ಅದರಳೊಗಾಗಿಯೇ ಕ್ರಿಕೆಟ್ ಪ್ರಯಾಣದುದ್ದಕ್ಕೂ ಎದುರಿಸಿದ ಸವಾಲುಗಳು, ಗಾಯಗಳು, ವೈಫಲ್ಯಗಳು ಎಲ್ಲವನ್ನು ಮುಕ್ತವಾಗಿ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಒಬ್ಬ ಸಾಮಾನ್ಯ ಹುಡುಗ ಕ್ರಿಕೆಟ್ ಐಕಾನ್ ಆಗಿದ್ದು ಹೇಗೆ, ಲಕ್ಷಾಂತರ ಮಂದಿಯ ಪ್ರೀತಿ ಗಳಿಸಿದ್ದು ಹೇಗೆ ಎಂಬ ಸ್ಪೂರ್ತಿಗಾಥೆಯನ್ನು ಪುಸ್ತಕದಲ್ಲಿ ಎಳೆ ಎಳೆಯಾಗಿ ಬಿಡಿಸಿದ್ದಾರೆ. ನಿನ್ನೆ ಬಿಡುಗಡೆಯಾದ ಪುಸ್ತಕ ಒಂದು ದಿನ ಕಳೆಯೂದ್ರೊಳಗೆ ಭಾರಿ ಸದ್ದು ಮಾಡುತ್ತಿದ್ದು, ವೃತ್ತಿ ಜೀವನದ ಹಲವು ಇಂಟರೆಸ್ಟಿಂಗ್ ವಿಚಾರಗಳನ್ನ ಹಂಚಿಕೊಂಡಿದ್ದಾರೆ.
ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಆತ್ಮಕಥನ ಬಿಡುಗಡೆ..!
ರೈನಾರ ‘ಬಿಲೀವ್’ ಪದಕ್ಕೂ ಸಚಿನ್ ಗಾಢ್ ಫಾದರ್..!
ಯೆಸ್..! ನಿನ್ನೆ ಬಿಡುಗಡೆಯಾಗಿರುವ ಸುರೇಶ್ ರೈನಾರ ಆತ್ಮಕಥನದ ಹೆಸರು Believe: What Life and Cricket Taught Me…! ಈ ಪುಸ್ತಕದ ಟೈಟಲ್ನ ಬಿಲೀವ್ ಪದಕ್ಕೂ ಸಚಿನ್ಗೂ ಸಂಬಂಧ ಇದೆ ಅನ್ನೋದೇ ಮೊದಲ ಇಂಟರೆಸ್ಟಿಂಗ್ ವಿಚಾರ. ಇಲ್ಲಿ ಬಳಸಲಾಗಿರುವ ಬಿಲೀವ್ ಎಂಬ ಪದ ರೈನಾ ತಮ್ಮ ಕರಿಯರ್ ನಲ್ಲೊಮ್ಮೆ ವೈಫಲ್ಯ ಕಂಡಾಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ಹೇಳಿದ ಕಿವಿಮಾತಂತೆ..! ಅಂದು ಸಚಿನ್ ಹೇಳಿದ ಈ ಮಾತು ರೈನಾಗೆ ಕಾನ್ಫಿಡೆನ್ಸ್ ತುಂಬಿತ್ತು, ಇದೇ ಕಾರಣದಿಂದ ಬಿಲಿವ್ ಎಂದು ತೋಳಿನ ಮೇಲೆ ಟ್ಯಾಟೋ ಹಾಕಿಸಿಕೊಂಡಿದ್ದ ರೈನಾ, ಇದೀಗ ತಮ್ಮ ಆತ್ಮಕಥೆಗೂ ಅದೇ ಹೆಸರನ್ನ ಇಟ್ಟಿದ್ದಾರೆ.
ಕ್ಯಾಪ್ಟನ್ ದ್ರಾವಿಡ್ ಬೈದಿದ್ದಕ್ಕೆ ಟಿ ಶರ್ಟ್ ಡಸ್ಟ್ಬಿನ್ಗೆ..!
ಯೆಸ್..! ಸುರೇಶ್ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಡೆಬ್ಯೂ ಮಾಡಿದ್ದು ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ. ತನ್ನ ಅವಿರತ ಶ್ರಮದಿಂದ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ರೈನಾ ಆರಂಭದ ದಿನಗಳಲ್ಲೇ ರಾಹುಲ್ ಕೆಂಗಣ್ಣಿಗೆ ಗುರಿಯಾಗಿದ್ರಂತೆ. 2006ರಲ್ಲಿ ವೆಸ್ಟ್ಇಂಡೀಸ್, ಆಸ್ಟ್ರೇಲಿಯಾ ಭಾರತದ ನಡುವಿನ ಟ್ರೈ ಸೀರಿಸ್ಗೆ ಮೆಲೇಷ್ಯಾಗೆ ತೆರಳಿದಾಗ ನಡೆದ ಘಟನೆ ಇದು. ಅಂದು ಅಸಭ್ಯ ಪದವನ್ನ ಬರೆದಿದ್ದ ಟೀ ಶರ್ಟ್ ಧರಿಸಿದ್ದಕ್ಕೆ ದ್ರಾವಿಡ್, ನೀನು ಭಾರತವನ್ನ ಪ್ರತಿನಿಧಿಸುತ್ತಿದ್ದಿಯಾ ಎಂಬ ಎಚ್ಚರಿಕೆ ಇರಲಿ ಎಂದು ಏರು ಧನಿಯಲ್ಲಿ ಗದರಿದ್ರಂತೆ. ಅದರ ಬೆನ್ನಲ್ಲೇ ರೈನಾ ಆ ಟಿ ಶರ್ಟ್ಅನ್ನ ಬಿಚ್ಚಿ ಡಸ್ಟ್ಬೀನ್ಗೆ ಎಸೆದಿದ್ರಂತೆ..!!
ಟೀಮ್ ಇಂಡಿಯಾ ಕಟ್ಟಿದ್ದು ಗಂಗೂಲಿಯಲ್ಲ, ದ್ರಾವಿಡ್..!
ಯಂಗ್ ಟೀಮ್ ಇಂಡಿಯಾದ ನಿರ್ಮಾತೃ ಸೌರವ್ ಗಂಗೂಲಿ ಎಂಬ ಮಾತು ಹೆಚ್ಚಾಗಿ ಬಳಕೆಯಲ್ಲಿದೆ. ಆತ್ಮಕಥೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿರುವ ರೈನಾ, ಯಂಗ್ ಟೀಮ್ಇಂಡಿಯಾವನ್ನ ಕಟ್ಟಿದ್ದು, ಗಂಗೂಲಿಯಲ್ಲ, ದ್ರಾವಿಡ್ ಎಂದು ಅಭಿಪ್ರಾಯಿಸಿದ್ದಾರೆ. ಗಂಗೂಲಿ ಮತ್ತು ಧೋನಿ ನಾಯಕರಾಗಿ ತಂಡದ ಮೇಲೆ ಅಧಿಕ ಪ್ರಭಾವ ಬೀರಿದ್ರು. ಆದ್ರೆ, ದ್ರಾವಿಡ್ ವಿದೇಶಗಳಲ್ಲಿ ತಂಡಕ್ಕೆ ಗೆಲುವುಗಳನ್ನ ತಂದುಕೊಟ್ಟರು ಮತ್ತು ಮೂರು ಮಾದರಿಗಳಲ್ಲೂ ತಂಡವನ್ನ ಸಮರ್ಥವಾಗಿ ಮುನ್ನಡೆಸಿದವರು. ಹೀಗಾಗಿ ತಂಡವನ್ನ ಕಟ್ಟಿದ ಶ್ರೇಯಸ್ಸು ದ್ರಾವಿಡ್ಗೆ ಸಲ್ಲಬೇಕು ಎಂದಿದ್ದಾರೆ.
ಚಾಪೆಲ್ ವಿಲನ್ ಅಲ್ಲ ಹೀರೋ, ಆದ್ರೆ ಈ ತಪ್ಪು ಮಾಡಬಾರದಿತ್ತು..!
ಆಸ್ಟ್ರೇಲಿಯಾದ ಮಾಜಿ ನಾಯಕ ಗ್ರೇಗ್ ಚಾಪೆಲ್ ಕೋಚ್ ಆಗಿದ್ದ ಅವಧಿಯನ್ನ ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ಕರಾಳ ದಿನಗಳು ಎಂದೇ ಹಲವರು ಕರೆದಿದ್ದಾರೆ. ಆದ್ರೆ, ಈ ಬಗ್ಗೆ ರೈನಾ ನಿಲುವು ತದ್ವಿರುದ್ಧವಾಗಿದೆ. ಚಾಪೆಲ್ ವೈಯ್ತಕ್ತಿವಾಗಿ ನನ್ನ ಯಶಸ್ಸಿಗೆ ಕಾರಣ ಎಂದು ಎಡಗೈ ಬ್ಯಾಟ್ಸ್ಮನ್ ಒಪ್ಪಿಕೊಂಡಿದ್ದಾರೆ. ಇದರ ಜೊತೆಗೆ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಅವರು ಗೌರವ ನೀಡುತ್ತಿರಲಿಲ್ಲ. ಅವರಂತಹ ಹಿರಿಯ ಆಟಗಾರರಿಗೆ ಅವರು ಇನ್ನಷ್ಟು ಗೌರವ ಕೊಡಬೇಕಿತ್ತು ಎಂಬುದನ್ನು ನಾನು ಕೂಡ ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ.
ದ್ರಾವಿಡ್ ಜಾಲಿ ಮೂಡ್ ಕಂಡು ಆಗಿತ್ತಂತೆ ಆಶ್ಚರ್ಯ..!
ರೈನಾ ತಮ್ಮ ಆಟೋ ಬಯಾಗ್ರಫಿಯ ಆರಂಭದಲ್ಲಿ ಹೆಚ್ಚು ಬರೆದಿರೋದು ದ್ರಾವಿಡ್ ಬಗ್ಗೆಯೇ. ರೈನಾ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ನಾಯಕನಾಗಿ ದ್ರಾವಿಡ್ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಆರಂಭದಲ್ಲಿ ಸದಾ ಗಂಬೀರ ಸ್ವರೂಪದಲ್ಲಿರುತ್ತಿದ್ದ ದಿ ವಾಲ್ ಕಂಡರೇ ರೈನಾ ಭಯಪಟ್ಟಿದ್ದೇ ಹೆಚ್ಚಂತೆ. ಆದ್ರೆ ವಿಂಡೀಸ್ ವಿರುದ್ಧದ ಸರಣಿ ಗೆದ್ದಾಗ ದ್ರಾವಿಡ್ ಜಾಲಿ ಮೂಡ್ನಲ್ಲಿದ್ದಿದ್ದನ್ನ ಕಂಡು ಆಶ್ಚರ್ಯವಾಗಿತ್ತಂತೆ. ಈ ಬಗ್ಗೆ ದ್ರಾವಿಡ್ ಬಳಿ ಕೇಳಿದಾಗ ಗೆದ್ದಾಗ ಸಂಭ್ರಮಿಸಬೇಕು ಎಂದು ಹೇಳಿದ್ರಂತೆ.
ಗೆಳೆಯ ಧೋನಿ ಬಗ್ಗೆಯೂ ಪುಸ್ತಕದಲ್ಲಿ ಪ್ರಸ್ತಾವ..!
ದ್ರಾವಿಡ್, ಗಂಗೂಲಿ, ಸಚಿನ್ ಮಾತ್ರವಲ್ಲ..! ಆತ್ಮೀಯ ಗೆಳೆಯ ಧೋನಿ ಬಗ್ಗೆಯೂ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ. ಧೋನಿಯೊಂದಿಗೆ ಕಳೆದ ಆನ್ ಫೀಲ್ಡ್ ಹಾಗೂ ಆಫ್ ದ ಪೀಲ್ಡ್ನ ಕ್ಷಣಗಳು, ಇಬ್ಬರ ನಡುವಿನ ಗೆಳೆತನ, ಮಾಹಿಯ ನಾಯಕತ್ವದ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜರ್ನಿಯನ್ನೂ ಇಡೀ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಱಗಿಂಗ್ಗೆ ಒಳಗಾಗಿದ್ರಂತೆ ಸ್ಫೋಟಕ ಬ್ಯಾಟ್ಸ್ಮನ್..!
ಕ್ರಿಕೆಟ್ ಜೀವನ ಮಾತ್ರವಲ್ಲ..! ತಮ್ಮ ಕಾಲೇಜು ದಿನಗಳನ್ನೂ ಆತ್ಮಕಥನದಲ್ಲಿ ರೈನಾ ಉಲ್ಲೇಖಿಸಿದ್ದಾರೆ. ವಿದ್ಯಾರ್ಥಿಯಾಗಿದ್ದಾಗ ಕಾನ್ಫುರ ಹಾಸ್ಟೆಲ್ನಲ್ಲಿದ್ದ ರೈನಾ ಸಹ ಪಾಠಿಗಳಿಂದ ಱಗಿಂಗ್ ಒಳಗಾಗಿದ್ರಂತೆ. ಕಾಲೇಜಿನ ಕೋಚ್ ರೈನಾ ಮೇಲೆ ಹೆಚ್ಚು ಸಮಯ ಮೀಸಲಿಡುತ್ತಿದ್ದರಿಂದ ಉಳಿದ ಅಥ್ಲೀಟ್ಗಳು ರೈನಾರನ್ನ ರೇಗಿಸುತ್ತಿದ್ದರಂತೆ. ಟೀಮ್ಇಂಡಿಯಾಗೆ ಬಂದಾಗ ಗ್ರೇಗ್ ಚಾಪೆಲ್ ರೈನಾ ಮೇಲೆ ಹೆಚ್ಚು ಕಾನ್ಸನ್ಟ್ರೇಟ್ ಮಾಡಿದಾಗಲೂ ಟೀಮ್ಮೆಟ್ಸ್ ಱಗಿಂಗ್ ಮಾಡ್ತಿದ್ರಂತೆ.
ಇಷ್ಟೇ ಅಲ್ಲ..! ಟೀಮ್ ಇಂಡಿಯಾ ಸೇರಿದ ಆರಂಭಿಕ ದಿನಗಳಲ್ಲಿ ಕೆಲ ಸೀನಿಯರ್ ಆಟಗಾರರು ರೈನಾ ಜೊತೆ ಮಾತನಾಡುತ್ತಲೇ ಇರಲಿಲ್ಲವಂತೆ. GOOD MORNING, GOOD AFTERNOON ವಿಷ್ ಮಾಡಿದ್ರೂ ತಿರುಗಿಯೂ ನೋಡ್ತಾ ಇರಲಿಲ್ಲ ಎಂದು ಬರೆದುಕೊಂಡಿದ್ದಾರೆ. ಆದ್ರೆ ಆ ಸೀನಿಯರ್ ಆಟಗಾರರು ಯಾರು ಅನ್ನೋದನ್ನ ಮಾತ್ರ ರಿವೀಲ್ ಮಾಡಿಲ್ಲ.
ಕುಟುಂಬದ ಕಡು ಕಷ್ಟದ ಬಗ್ಗೆಯೂ ಉಲ್ಲೇಖ..!
ತಮ್ಮ ಕುಟುಂಬಕ್ಕಿದ್ದ ಕಷ್ಟದ ಬಗ್ಗೆಯೂ ರೈನಾ ತಮ್ಮ ಆತ್ಮಕಥನದಲ್ಲಿ ಉಲ್ಲೇಖಿಸಿದ್ದಾರೆ. 1999ರಲ್ಲಿ ಕೋಚ್ ಪ್ರವೀಣ್ ಆಮ್ರೆ ಸಹಾಯದಿಂದ ಏರ್ಇಂಡಿಯಾ ಪರ ಆಡೋಕೆ ಅವಕಾಶಗಿಟ್ಟಿಸಿಕೊಂಡಿದ್ರಂತೆ. ಅದರಲ್ಲಿ ಸಿಗ್ತಿದ್ದ 10,000 ಗೌರವ ಧನದಲ್ಲಿ 8 ಸಾವಿರವನ್ನ ಮನೆಗೆ ವ್ಯಯಿಸುತ್ತಿದ್ದರಂತೆ,. ಉಳಿದ 2000ದಲ್ಲೇ ತಮ್ಮ ಕಿಟ್, ಅಭ್ಯಾಸ ಮುಂತಾದ ಖರ್ಚುಗಳನ್ನ ಸಂಭಾಳಿಸಬೇಕಿತ್ತಂತೆ. ಇನ್ನು ಹಣದ ಅಭಾವದಿಂದಾಗಿ ಕೇವಲ 2 ನಿಮಿಷಗಳ ಕಾಲ ಮಾತ್ರ ಮನೆಗೆ ಎಸ್ಟಿಡಿ ಕಾಲ್ ಮಾಡಿ ಮಾತನಾಡ್ತಿದ್ರಂತೆ.
ಇವಿಷ್ಟು ಆತ್ಮಕಥನ ಬಿಡುಗಡೆಯಾದ ಮೊದಲ ದಿನವೇ ಹೆಚ್ಚು ಸುದ್ದಿಯಾದ ಇಂಟರೆಸ್ಟಿಂಗ್ ವಿಚಾರಗಳು. 240 ಪುಟಗಳ ಇಡೀ ಪುಸ್ತಕದಲ್ಲಿ ಇನ್ನೆಷ್ಟು ಕುತೂಹಲಕಾರಿ ವಿಚಾರಗಳಿವೆ ಅನ್ನೋದನ್ನ ಕಾದು ನೋಡಬೇಕಿದೆ. ‘