ಬಂಟ್ವಾಳ: ವೃದ್ಧ ಮಹಿಳೆಯೊಬ್ಬರನ್ನು ಆಕೆಯ ಮಗ ಮತ್ತು ಸೊಸೆ ಸರಿಯಾದ ರೀತಿ ಆರೈಕೆ ಮಾಡದೆ ಮನೆಯ ಶೌಚಗೃಹದಲ್ಲಿ ಕೂಡಿ ಹಾಕಿ ಒಂದು ಹೊತ್ತು ಮಾತ್ರ ಊಟ ನೀಡಿ ಅಮಾನವೀಯತೆ ಮೆರೆದ ಘಟನೆ ಬಂಟ್ವಾಳ ತಾಲೂಕಿನ ಕಳ್ಳಿಗೆ ಬೆಂಜನಪದವು ಕರಾವಳಿ ಸೈಟ್ ಎಂಬಲ್ಲಿ ನಡೆದಿದೆ.
ಕಳ್ಳಿಗೆ ಬೆಂಜನಪದವು ಕರಾವಳಿ ಸೈಟ್ ನಿವಾಸಿ ಗಿರಿಜಾ(70) ವೃದ್ಧ ಮಹಿಳೆ.
ಗಿರಿಜಾ ರವರ ಮಗ ಹರಿರಾಂ ಮತ್ತು ಆತನ ಪತ್ನಿ ಪೂಜಾ ವೃದ್ಧೆಯನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳದೆ ಇದ್ದು, ಗಿರಿಜಾ ರವರು ಮನೆಯಲ್ಲಿಯೇ ಬಿದ್ದು ಗಾಯಗೊಂಡ ಕಾರಣ ನಡೆಯಲು ಆಗದೆ ಹಾಸಿಗೆಯಲ್ಲಿಯೇ ಮಲಗುವಂತಾಗಿದ್ದು, ಆದರೂ ಅವರಿಗೆ ಸರಿಯಾದ ರೀತಿ ಚಿಕಿತ್ಸೆ ನೀಡಿದೆ. ಮನೆಯ ಶೌಚಗೃಹದಲ್ಲಿ ಕೂಡಿ ಹಾಕಿ ಒಂದು ಹೊತ್ತು ಮಾತ್ರ ಊಟ ಮತ್ತು ಚಾ ನೀಡುತ್ತಿದ್ದರಲ್ಲದೆ, ತುಳುವಿನಲ್ಲಿ ‘ಪರಬ್ಬು ಸೈಪುನಿಲ ಇಜ್ಜಿ’ ಎಂದೆಲ್ಲಾ ನಿಂದಿಸುತ್ತಿದ್ದರು. ಅಷ್ಟೇ ಅಲ್ಲದೇ ಊಟ ಕೇಳಿದಾಗ ‘ಪರಬ್ಬು ನಿಕ್ಕ್ ವನಸ್ ಕೊರ್ಪುಜಿ ಮಣ್ಣ್ ತಿಂದುದು ಸೈಲ’ ಎಂದೆಲ್ಲಾ ನಿಂದಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದ ಹಿರಿಯ ನಾಗರಿಕ ಸಮಿತಿ ಜು.6 ರಂದು ವೃದ್ಧ ಮಹಿಳೆಯನ್ನು ಶೌಚಗೃಹದಿಂದ ಹೊರ ತಂದು ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ.
ವೃದ್ದೆ ನೀಡಿದ ದೂರಿನ್ವಯ ಮಗ ಮತ್ತು ಸೊಸೆಯ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ 68/2022 ಕಲಂ: 336, 504 ಜೊತೆ 34 ಐಪಿಸಿ ಮತ್ತು ಕಲಂ 24 Maintenance and Welfare of Parents and Senior Citizens Act, 2007 ರಂತೆ ಪ್ರಕರಣ ದಾಖಲಾಗಿದೆ.

























