ಉಪ್ಪಿನಂಗಡಿ: ಇಲ್ಲಿನ ಹೊಸ ಬಸ್ ನಿಲ್ದಾಣದ ಬಳಿ ಇರುವ ಪಂಚಾಯತ್ ಸ್ವಾಮ್ಯದ ವಾಣಿಜ್ಯ ಸಂಕೀರ್ಣಗಳ ಏಲಂ ಬಿಡ್‌ನಲ್ಲಿ ಪಡೆದ ಅಂಗಡಿ ಕೋಣೆಗಳ ಕಂತು ಬಾಕಿ ಇರಿಸಿದ್ದ 20 ಅಂಗಡಿಗಳಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗ್ರಸ್ ಮಂಗಳವಾರದಂದು ಬೀಗ ಜಡಿದು ದಿಟ್ಟತನ ಪ್ರದರ್ಶಿಸಿದ್ದಾರೆ.
ಎಲಂ ಪ್ರಕ್ರಿಯೆಯಲ್ಲಿ ಪಡೆದುಕೊಂಡ ಅಂಗಡಿ ಕೊಠಡಿಗಳ ಬಿಡ್ ಮೊತ್ತವನ್ನು ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಿದ್ದು, ಇದರಂತೆ ಹಲವರು ಉಳಿಕೆ ಮೊತ್ತದ ಕಂತುಗಳನ್ನು ಪಾವತಿಸದೆ ಬಾಕಿ ಉಳಿಸಿಕೊಂಡಿದ್ದರು.
ಬಾಕಿಯಾದ ಮೊತ್ತವನ್ನು ಪಾವತಿಸುವಂತೆ ಹಲವು ಬಾರಿ ಸೂಚನೆ ನೀಡಿದ್ದರೂ ಸ್ಪಂದಿಸದ ವ್ಯಕ್ತಿಗಳ ಅನುಭೋಗದಲ್ಲಿರುವ ಅಂಗಡಿ ಕೊಠಡಿಗಳಿಗೆ, ಸರಕಾರಿ ರಜಾ ದಿನವಾದ ಏ, 14ರಂದು ಮುಂಜಾನೆಯಿಂದಲೇ ಬೀಗ ಜಡಿಯುವ ಕಾರ್ಯಾಚರಣೆ ನಡೆಸಲಾಯಿತು.
ನಿಕಟಪೂರ್ವ ಪಂಚಾಯತ್ ಸದಸ್ಯರು ಅನುಭೋಗದಾರರಾಗಿರುವ ಅಂಗಡಿ ಕೊಠಡಿಗಳೂ ಸೇರಿದ್ದು, ಅವರ ಅಂಗಡಿಗಳಿಗೂ ಬೀಗ ಜಡಿಯುವ ಮೂಲಕ ನಿಯಮ ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತಿದೆ ಎಂಬ ಸಂದೇಶವನ್ನು ಪಿಡಿಒ ನೀಡಿದ್ದಾರೆ.
ಮೊತ್ತ ಬಾಕಿ ಇರಿಸಲಾದ ಅಂಗಡಿಗಳಿಗೆ ಪಂಚಾಯತ್ ಆಡಳಿತದಿಂದ ಬೀಗ ಜಡಿದು ಎಚ್ಚರಿಕೆ ನೋಟೀಸನ್ನು ಕೊಠಡಿಯ ಬಾಗಿಲಿಗೆ ಅಂಟಿಸಲಾಗಿತ್ತು.




























