ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ೨೦೨೫-೨೬ನೇ ಸಾಲಿನಲ್ಲಿ ೧೦೯೦ ಕೋಟಿ ರೂ.ಗಳ ವ್ಯವಹಾರ ನಡೆಸಿ, ೪.೦೫ ಕೋಟಿ ರೂ. ನಿವ್ವಳ ಲಾಭ ಗಳಿಸುವ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿದೆ. ಕಳೆದ ಸಾಲಿಗಿಂತ ೨೨೬ಕೋಟಿ ಹೆಚ್ಚಿನ ವ್ಯವಹಾರ ನಡೆಸುವ ಮೂಲಕ ಸಾರ್ವಕಾಲಿಕ ದಾಖಲೆ ಮಾಡಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಚ್. ಜಗನ್ನಾಥ ಸಾಲಿಯಾನ್ ರವರು ಹೇಳಿದರು.
ಅವರು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತದ ಪ್ರಧಾನ ಕಚೇರಿಯಲ್ಲಿ ನಿರ್ದೇಶಕರ ಸಭೆಯಲ್ಲಿ ಮಾಹಿತಿ ನೀಡಿದರು.
ಬ್ಯಾಂಕ್ ನಲ್ಲಿ ೯೧೮೯ ಮಂದಿ ಸದಸ್ಯರಿದ್ದು, ೩.೦೪ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. ಠೇವಣಿ ಸಂಗ್ರಹದಲ್ಲಿ ಹಲವು ಸವಾಲುಗಳ ನಡುವೆಯೂ ೧೪೯.೮೪ ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, ಕಳೆದ ವರ್ಷಕ್ಕಿಂತ ಶೇ. ೧೧.೨೨ ಹೆಚ್ಚಳವಾಗಿದೆ. ೧೨೫.೬೩ ಕೋಟಿ ರೂ ಹೊರ ಬಾಕಿ ಸಾಲವಿದ್ದು, ಶೇ. ೯೫.೧೧ ಸಾಲ ವಸೂಲಾತಿಯಾಗಿದೆ. ೯.೯೬ ಕೋಟಿ ರೂ ಮೀಸಲು ನಿಧಿ ಹಾಗೂ ೧೩.೬೫ ಕೋಟಿ ರೂ ಇತರ ನಿಧಿಯನ್ನು ಹೊಂದಿದೆ. ೧೮೦.೫೫ ಕೋಟಿ ರೂ. ದುಡಿಯುವ ಬಂಡವಾಳವಿದ್ದು, ೪.೪೩ ಕೋಟಿ ರೂ. ಗಳ ಚರ, ಸ್ಥಿರ ಆಸ್ತಿಯನ್ನು ಹೊಂದಿದೆ.
ಬ್ಯಾಂಕ್ ಹಿಂದಿನ ಹಲವಾರು ವರ್ಷದಿಂದ ಆಡಿಟ್ ವರ್ಗೀಕರಣದಲ್ಲಿ ’ಎ’ ತರಗತಿಯಲ್ಲಿದ್ದು, ಮುಂದೆಯೂ ಇದನ್ನು ಕಾಯ್ದಿರಿಸಿಕೊಳ್ಳಲಿದೆ. ೨೦೨೬-೨೭ ನೇ ಸಾಲಿನಲ್ಲಿ ಬ್ಯಾಂಕು ೧೧೫೦ ಕೋಟಿಗೂ ಮಿಕ್ಕಿದ ವ್ಯವಹಾರ ನಡೆಸಿ, ೪.೪೫ ಕೋಟಿ ರೂಗೂ ಮೀರಿದ ಲಾಭ ದಾಖಲಿಸುವ ಗುರಿಹೊಂದಿದೆ. ಅಲ್ಲದೇ ೧೬೦ ಕೋಟಿ ರೂ ಠೇವಣಿ ಸಂಗ್ರಹಿಸುವ ಹಾಗೂ ಶೇ.೯೬ ಸಾಲ ವಸೂಲಾತಿ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಬ್ಯಾಂಕಿನ ೩೨ ನುರಿತ ಸಿಬ್ಬಂದಿಗಳ ಪೂರ್ಣಸಹಕಾರದೊಂದಿಗೆ ಇದನ್ನು ಸಾಧಿಸಲಾಗುವುದು. ಕಳೆದ ಸಾಲಿನಲ್ಲಿ ಶೇ.೨೨ ಡಿವಿಡೆಂಡ್ ವಿತರಣೆ ಮಾಡಲಾಗಿದೆ ಎಂದರು.
ಉಪ್ಪಿನಂಗಡಿಯಲ್ಲಿ ೫ನೇ ಶಾಖೆಯ ತೆರೆಯುವ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಕೇಂದ್ರ ಸಹಕಾರಿಯಿಂದ ಸತತವಾಗಿ ೪ ಬಾರಿ ಸಾಧನಾ ಪ್ರಶಸ್ತಿಯನ್ನು ಪಡೆದುಕೊಂಡಿದೆ. ವಿಟ್ಲ ಪೇಟೆ ಅಗಲೀಕರಣ ಆಗುವ ಸಂದರ್ಭ ಕಟ್ಟಡದ ಮುಂಭಾಗ ತೆಗೆಯ ಬೇಕಾದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ೩೦ರಿಂದ ೪೦ ಸೆಂಟ್ಸ್ ಜಾಗ ಖರೀದಿಸುವ ಪ್ರಸ್ತಾವನೆಯಿದೆ. ಉಜಿರೆಯಲ್ಲಿ ಹೊಸ ಶಾಖೆಯನ್ನು ಮಾಡುವ ನಿಟ್ಟಿನಲ್ಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸಂಘಕ್ಕೆ ೭೫ ವರ್ಷ ತುಂಬುವ ಸಂದರ್ಭ ಹೊಸ ಕಟ್ಟಡದ ಜತೆಗೆ ವಿಟ್ಲ ಪ್ರಧಾನ ಕಛೇರಿಯಲ್ಲಿ ಪ್ರತ್ಯೇಕಾ ಆಡಳಿತ ಕಛೇರಿಯನ್ನು ಹೊಂದು ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಮನೋರಂಜನ್ ಕೆ. ಆರ್. ನಿರ್ದೇಶಕರಾದ ಜಯಂತಿ ಎಚ್. ರಾವ್, ಶುಭಲಕ್ಷ್ಮಿ, ದಯಾನಂದ ಆಳ್ವ ಕೆ. ಪೂವಪ್ಪ ಎಸ್., ದಿವಾಕರ ವಿ., ಕೇಶವ ಎ., ಗೋವರ್ಧನ ಕುಮಾರ್ ಐ., ಭಾಸ್ಕರ್ ಶೆಟ್ಟಿ, ರಾಮದಾಸ ಶೆಣೈ, ಮೋಹನ್ ಕೆ. ಎಸ್., ವಿಶ್ವನಾಥ ಎಂ., ತಿರುಮಲೇಶ್ವರ ಭಟ್, ಸತೀಶ್ ಪಿ., ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೃಷ್ಣ ಮುರಳಿ ಶ್ಯಾಮ್ ಕೆ. ಉಪಸ್ಥಿತರಿದ್ದರು.



























