ಬಂಟ್ವಾಳ: ಸಾಲೆತ್ತೂರು-ಮಾರ್ನಬೈಲು ಸಂಪರ್ಕ ರಸ್ತೆಯ ಕುಕ್ಕಾಜೆ ಜಂಕ್ಷನ್ ಬಳಿ ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾರೆ.
ಇರಾ ಗ್ರಾಮದ ಕುಕ್ಕಾಜೆ ಬೈಲ್ ನಿವಾಸಿ, ಅಶೋಕ ಎಂಬವರ ಏಕೈಕ ಪುತ್ರ ಮನೀಶ್ (22) ಮೃತಪಟ್ಟ ದುರ್ದೈವಿ. ಇವರು ಮಂಚಿಯಲ್ಲಿರುವ ವಿಕಾಸ್ ಶಾಮಿಯಾನ ಸಂಸ್ಥೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮನೀಶ್ ಅವರು ಸಾಲೆತ್ತೂರಿನಿಂದ ಕುಕ್ಕಾಜೆ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಆಪೆ ರಿಕ್ಷಾ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು.
ತಕ್ಷಣವೇ ಸ್ಥಳೀಯರು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರಾದರೂ, ಅವರು ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಮನೀಶ್ ಅವರು ಕುಟುಂಬದ ಏಕೈಕ ಪುತ್ರನಾಗಿದ್ದು, ಮನೆಯ ಆಧಾರಸ್ತಂಭವಾಗಿದ್ದ ಯುವಕನ ಅಗಲಿಕೆಯಿಂದ ಕುಕ್ಕಾಜೆ ಪರಿಸರದಲ್ಲಿ ಶೋಕ ಮಡುಗಟ್ಟಿದೆ.




























