ಕೈಕಂಬ : ಗುರುಪುರ ಮಾಣಿ ಬೆಟ್ಟು ಶ್ರೀಕೋರ್ದಬ್ಬು ಪರಿವಾರ ದೈವಸ್ಥಾನದ ಮೂಲ ಸಾನ್ನಿಧ್ಯವಿದ್ದ ಜಾಗದಲ್ಲಿ ಸುಮಾರು 350 ವರ್ಷಗಳಷ್ಟು ಹಳೆಯದಾದ ದೈವದ ಮೂರ್ತಿ, ಪರಿಕರಗಳು ಬುಧವಾರ ಪತ್ತೆಯಾಗಿವೆ.
ಆ ಪ್ರದೇಶದ ಜನರಿಗೆ ಸಮಸ್ಯೆಗಳು ಎದುರಾಗುತ್ತಿದ್ದು ಇದರಿಂದ ಬುಧವಾರ ಮಾಣಿಬೆಟ್ಟು ಗುತ್ತು, ಕಾರಮೊಗೆರು ಗುತ್ತು, ಬರ್ಕೆ ಹಾಗೂ ಊರಿನವರು ಒಟ್ಟು ಸೇರಿ ಮೂಲ ಸಾನಿಧ್ಯವಿದ್ದ ಜಾಗದಲ್ಲಿ ಉತ್ಖನನ ಆರಂಭಿಸಿದ್ದರು. ಈ ಸಂದರ್ಭ ಸುಮಾರು350ವರ್ಷಗಳಷ್ಟು ಹಳೆಯದಾದ ದೈವದ ಮೂರ್ತಿ, ಪರಿಕರಗಳು ಪತ್ತೆಯಾಗಿವೆ. ಇತ್ತೀಚೆಗೆ ದೈವಸ್ಥಾನದಲ್ಲಿ ಇಡಲಾಗಿದ್ದ ತಾಂಬೂಲ ಪ್ರಶ್ನೆಯ ವೇಳೆ ಶಶಿಕುಮಾರ್ ಪಂಡಿತ್ ಅವರು ದೈವಸ್ಥಾನವಿದ್ದ ಪ್ರದೇಶದಲ್ಲಿ ದೈವದ ಪರಿಕರಗಳು ಇರುವ ಬಗ್ಗೆ ಹೇಳಿದ್ದರು.
ಉತ್ಖನನದ ವೇಳೆ ಸುಮಾರು300 ವರ್ಷಗಳಷ್ಟು ಹಳೆಯದಾದ ದೈವದ ಮೂರ್ತಿ, ಕಂಚಿನ ಮೊಲ, ಖಡ್ಸಲೆ, ಗೋಣ (ಕೋಣ), ದೈವದ ಕಲ್ಲು, ಗಂಟೆಮಣಿ, ಸುತ್ತಿಗೆ, ತಂದೇಲ್, ದೀಪ ಮತ್ತಿತರ ಸೊತ್ತುಗಳು ಪತ್ತೆಯಾಗಿವೆ. ಇವುಗಳಲ್ಲಿ ದೀಪ ಮಣ್ಣಿದ್ದಾಗಿದ್ದರೆ, ಉಳಿದ ಸೊತ್ತುಗಳು ಪಂಚಲೋಹ, ಕಂಚು, ಹಿತ್ತಾಳೆ ಮತ್ತು ಕಬ್ಬಿಣದ್ದಾಗಿವೆ.