ಪುತ್ತೂರು: ದೇವಸ್ಥಾನ ಜಾತ್ರೆಯ ವೇಳೆ ನಡೆದ ಗಲಾಟೆ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಏಪ್ರಿಲ್ 20ರ ರಾತ್ರಿ ಜಾತ್ರೆ ನಡೆಯುತ್ತಿದ್ದ ಸ್ಥಳದಲ್ಲಿ ಪುತ್ತೂರು ನಗರ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ದೇವಸ್ಥಾನದ ಕಚೇರಿ ಸಮೀಪ ಜನಸಮೂಹ ಜಮಾಯಿಸಿದ್ದನ್ನು ಗಮನಿಸಿ ಪರಿಶೀಲನೆಗೆ ತೆರಳಿದಾಗ, ಇಬ್ಬರು ವ್ಯಕ್ತಿಗಳು ಗಲಾಟೆ ನಡೆಸುತ್ತಾ ಸಾರ್ವಜನಿಕ ಶಾಂತಿ ಭಂಗಪಡಿಸುತ್ತಿರುವುದು ಕಂಡುಬಂದಿದೆ.
ಪೊಲೀಸರು ಗಲಾಟೆ ನಿಲ್ಲಿಸುವಂತೆ ತಿಳಿಸಿದರೂ, ಅವರು ಸೂಚನೆ ಪಾಲಿಸದೇ ವರ್ತಿಸಿದ ಹಿನ್ನೆಲೆಯಲ್ಲಿ ಮುಂದಿನ ಕಾನೂನು ಕ್ರಮಕ್ಕಾಗಿ ವಶಕ್ಕೆ ಪಡೆಯಲಾಗಿದೆ. ವಿಚಾರಣೆ ನಡೆಸಿದಾಗ, ಬಂಧಿತರು ನರಿಮೊಗರು ನಿವಾಸಿ ಹರ್ಷ ಗೋಪಾಲ್ (29) ಹಾಗೂ ಕಬಕ ನಿವಾಸಿ ಹರೀಶ್ (42) ಎಂದು ಗುರುತಿಸಲಾಗಿದೆ.
ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಕ್ರಮ ಸಂಖ್ಯೆ 48/2026ರಡಿ, ಬಿಎನ್ಎಸ್ 2023ರ ಕಲಂ 194(2) ಪ್ರಕಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

























