ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಪ್ರತಿಭಾವಂತ ಬಾಲಕಿ ಶ್ರೀವಿಭಾ ಕೇಪು ಅವರು ಇದೀಗ ಕನ್ನಡದ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಸರಿಗಮಪ ಲಿಟಲ್ ಚಾಂಪ್ಸ್ ಗೆ ಆಯ್ಕೆಯಾಗಿರುವುದು ಸ್ಥಳೀಯರಿಗೆ ಹೆಮ್ಮೆಯ ವಿಷಯವಾಗಿದೆ.
ಶ್ರೀವಿಭಾ ಕೇಪು ಅವರು ವಕೀಲರಾದ ಶ್ರೀಕೃಷ್ಣ ಕೇಪು ಹಾಗೂ ಮೀರಾ ದಂಪತಿಗಳ ಸುಪುತ್ರಿ. ಬಾಲ್ಯದಿಂದಲೇ ಸಂಗೀತದ ಮೇಲೆ ಅಪಾರ ಆಸಕ್ತಿ ಹೊಂದಿರುವ ಇವರು, ಪ್ರಸಿದ್ಧ ಗುರು ಡಾ. ವಿದುಷಿ ಸುಚಿತ್ರ ಹೊಳ್ಳ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾರೆ. ಜೊತೆಗೆ ಸುಗಮ ಸಂಗೀತವನ್ನು ಅಖಿಲ ಪಜಿಮಣ್ಣು ಹಾಗೂ ಗಾಯತ್ರಿ ಭಟ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.
ಪ್ರಸ್ತುತ ಶ್ರೀವಿಭಾ ಅವರು ಪುತ್ತೂರು ಸುಧಾನ ವಸತಿಯುತ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ವಿದ್ಯಾಭ್ಯಾಸದ ಜೊತೆಗೆ ಸಂಗೀತದಲ್ಲಿಯೂ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಅವರ ಈ ಸಾಧನೆಗೆ ಕುಟುಂಬದವರು, ಗುರುಗಳು ಹಾಗೂ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಇಂತಹ ಪ್ರತಿಭಾವಂತ ವಿದ್ಯಾರ್ಥಿನಿಯ ಸಾಧನೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಮಟ್ಟಕ್ಕೆ ಏರಲೆಂದು ಎಲ್ಲರೂ ಹಾರೈಸುತ್ತಿದ್ದಾರೆ.


























