ನೆಲ್ಯಾಡಿ: ಮಾದಕ ವಸ್ತು ಸೇವನೆ ಮಾಡಿದ ಆರೋಪದಲ್ಲಿ ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ನಿರ್ಮಾಣ ಹಂತದ ಟೋಲ್‌ಗೇಟ್ ಬಳಿ ಉಪ್ಪಿನಂಗಡಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಅನನ್ಯ ಶ್ರೀವಾಸ್ತವ್ ಅವರು ಮೇ 3ರಂದು ಮಧ್ಯಾಹ್ನ ರೌಂಡ್ಸ್‌ನಲ್ಲಿದ್ದ ವೇಳೆ ಬಜತ್ತೂರು ಗ್ರಾಮದ ನೀರಕಟ್ಟೆ ಸಮೀಪ, ನಿರ್ಮಾಣ ಹಂತದ ಟೋಲ್‌ಗೇಟ್ ಬಳಿ ಇಬ್ಬರು ವ್ಯಕ್ತಿಗಳು ಹೀನಾಯವಾಗಿ ಮಾತನಾಡುತ್ತಾ ಅನುಚಿತವಾಗಿ ವರ್ತಿಸುತ್ತಿರುವುದನ್ನು ಕಂಡು ಸ್ಥಳಕ್ಕೆ ಹೋಗಿ ವಿಚಾರಿಸಿದಾಗ, ಅವರು ಸಮರ್ಪಕ ಉತ್ತರವನ್ನು ನೀಡಲು ಅಸಮರ್ಥರಾಗಿದ್ದು, ಯಾವುದೋ ಅಮಲು ಪದಾರ್ಥ ಅಥವಾ ಮಾದಕ ವಸ್ತುವನ್ನು ಸೇವಿಸಿದ ಬಗ್ಗೆ ಕಂಡು ಬಂದಿದೆ.
ಇದರಿಂದ ಸಂಶಯಗೊಂಡು ಅವರನ್ನು ಇನ್ನಷ್ಟು ವಿಚಾರಿಸಿದಾಗ ಅವರು ಮಾದಕ ವಸ್ತುವನ್ನು ಸೇವನೆ ಮಾಡಿದ್ದಾಗಿ ಒಪ್ಪಿಕೊಂಡಿದ್ದು ಸದ್ರಿ ವ್ಯಕ್ತಿಗಳು ಬಜತ್ತೂರು ನಿವಾಸಿಗಳಾದ ಅಹಮ್ಮದ್ ಅನ್ಸಾರ್ (25) ಹಾಗೂ ಮಹಮ್ಮದ್ ಇರ್ಷಾದ್ (26) ಎಂಬುದಾಗಿ ತಿಳಿಸಿದ್ದು, ಅವರನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮಾದಕ ವಸ್ತುವನ್ನು ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


























