ಪುತ್ತೂರು: ಪೂಜೆ ಕಾರ್ಯಕ್ರಮ ಮುಗಿಸಿ ಮನೆಗೆ ಕಾರಿನಲ್ಲಿ ತೆರಳುತ್ತಿದ್ದ ಪುರೋಹಿತರೊಬ್ಬರ ಕಾರನ್ನು ತಡೆದು ಅಪರಿಚಿತ ವ್ಯಕ್ತಿಯೋರ್ವ ಹಲ್ಲೆ ನಡೆಸಿದ ಘಟನೆ ಮೇ 4ರಂದು ರಾತ್ರಿ ಕಬಕ ಗ್ರಾಮದ ವಿದ್ಯಾಪುರದಲ್ಲಿ ನಡೆದಿದೆ.
ಕಬಕ ವಿದ್ಯಾಪುರ ನಿವಾಸಿ ಬಾಲಕೃಷ್ಣ ಜೋಯಿಸ ಅವರ ಪುತ್ರ ಗಣೇಶ್ ವಿ(39ವ.) ರವರು ಹಲ್ಲೆಗೊಳಗಾದವರು. ಮೇ 4ರಂದು ತಾನು ಕಾರಲ್ಲಿ(ಕೆಎ01-ಎಂಎಲ್ 9704)ರಲ್ಲಿ ಕಲ್ಲಡ್ಕದ ಉಮಾಶಿವ ಕ್ಷೇತ್ರ ದೇವಸ್ಥಾನದ ಪೂಜೆಗೆಂದು ತೆರಳಿ ವಾಪಸ್ ಮನೆಗೆ ಬರುವಾಗ ಕಬಕ ಗ್ರಾಮದ ವಿದ್ಯಾಪುರಕ್ಕೆ ತಲುಪಿದಾಗ ರಸ್ತೆ ಬದಿಯಲ್ಲಿರುವ ಮನೆಯೊಂದರಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ರಸ್ತೆಯಲ್ಲಿ ಜನರು ಮತ್ತು ವಾಹನ ದಟ್ಟನೆ ಇದ್ದುದರಿಂದ ತಾನು ನಿಧಾನವಾಗಿ ಕಾರು ಚಲಾಯಿಸಿಕೊಂಡು ಹೋಗುತ್ತಿರುವಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ನನ್ನ ಕಾರನ್ನು ಅಕ್ರಮವಾಗಿ ಏಕಾಏಕಿ ತಡೆದು ನಿಲ್ಲಿಸಿದಾಗ ನಾನು ಕಾರಿನ ಗ್ಲಾಸನ್ನು ಇಳಿಸಿದ್ದು ಆ ಸಮಯ ಆತ ನನ್ನನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿದ.
ಈ ವೇಳೆ ತಾನು ಕಾರಿನಿಂದ ಇಳಿದಾಗ ಆತ ಹೊಡೆದು ಕಾಲಿನಿಂದ ತುಳಿದು ನೋವು ಉಂಟು ಮಾಡಿ, ನನ್ನ ಮೇಲೆ ಕೇಸು ಮಾಡಿದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವಬೆದರಿಕೆ ಹಾಕಿ ಅಲ್ಲಿಂದ ಹೋಗಿದ್ದ’ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹಲ್ಲೆಗೊಳಗಾದ ಗಣೇಶ್ ಭಟ್ ಅವರು ನೀಡಿದ ದೂರಿನಂತೆ ಕಲಂ 126(2),115(2), 352,351(2)ಬಿಎನ್‌ಸ್ ಅಡಿಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಸ್ಪತ್ರೆಗೆ ಕುಮಾರ್ ಪುತ್ತಿಲ ಭೇಟಿ ನೀಡಿ ಗಣೇಶ್ ಭಟ್ ಅವರ ಆರೋಗ್ಯ ವಿಚಾರಿಸಿದ್ದಾರೆ.


























