ಪುತ್ತೂರು: ಮದುವೆ ದಿಬ್ಬಣದ ಖಾಸಗಿ ಬಸ್ ಗೆ ರಿಕ್ಷಾವೊಂದನ್ನು ಅಡ್ಡವಿಟ್ಟು ಬಸ್ ಚಾಲಕನಿಗೆ ಹಲ್ಲೆ ನಡೆಸಿದ ಘಟನೆ ಮೇ.06 ರಂದು ಮುರದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ವಿಟ್ಲದಿಂದ ಮಡಿಕೇರಿಗೆ ತೆರಳುತ್ತಿದ್ದ, ಪಡೀಲ್ ಚಾಮುಂಡೇಶ್ವರಿ ಗ್ಯಾರೇಜ್‌ನ ಅಶೋಕ್ ಎಂಬವರ ಮಾಲಕತ್ವದ ಟೂರಿಸ್ಟ್ ಬಸ್‌ನ ಚಾಲಕ ಸಾಮೆತ್ತಡ್ಕ ನಿವಾಸಿ ರಾಕೇಶ್ ಡಿ’ಸೋಜ(31ವ) ಅವರು ಹಲ್ಲೆಗೊಳಗಾದವರು.
“ವಿಟ್ಲದಿಂದ ಮಡಿಕೇರಿಗೆ ಮದುವೆ ದಿಬ್ಬಣವನ್ನು ಬಸ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಉರಿಮಜಲು ಸಮೀಪ ಬಸ್‌ನ ಎದುರಿನಿಂದ ಆಟೋ ರಿಕ್ಷಾವೊಂದು ಹೋಗುತ್ತಿದ್ದು, ಅದರ ಚಾಲಕನು ಒಮ್ಮೆಲೇ ಬ್ರೇಕ್ ಹಾಕಿ ನಿಲ್ಲಿಸಿ ಜನರನ್ನು ತುಂಬಿಸುತ್ತಿದ್ದ ಸಂದರ್ಭ, ಸ್ವಲ್ಪ ಬದಿಯಲ್ಲಿ ರಿಕ್ಷಾವನ್ನು ನಿಲ್ಲಿಸಿ ಜನರನ್ನು ತುಂಬಿಸಲು ಆಗುವುದಿಲ್ಲವೇ?, ನಿಮ್ಮಿಂದಾಗಿ ಒಮ್ಮೆಲೇ ಬ್ರೇಕ್ ಹಾಕಿದರೆ ಪ್ರಯಾಣಿಕರಿಗೆ ಗಾಯ, ನೋವು ಆಗುವುದಿಲ್ಲವೇ ಎಂದು ರಿಕ್ಷಾ ಚಾಲಕನಲ್ಲಿ ಕೇಳಿದೆ.
ಈ ವೇಳೆ ಆತ ಉಡಾಫೆಯಾಗಿ ಮಾತನಾಡಿ,ನೀನು ಕಬಕಕ್ಕೆ ಬಾ ನಿನ್ನನ್ನು ಅಲ್ಲಿ ನೋಡಿಕೊಳ್ಳುತ್ತೇನೆ ಎಂದು ಹೇಳಿ ಅಲ್ಲಿಂದ ಹೊರಟು, ಕಬಕದಲ್ಲಿ ಮತ್ತೆ ರಿಕ್ಷಾವನ್ನು ನಿಲ್ಲಿಸಿ, ನನಗೆ ಮುರದಲ್ಲಿ ಜನ ಇದ್ದಾರೆ ಎಂದು ಹೇಳಿ ಮುರಕ್ಕೆ ತಲುಪಿದಾಗ ಅಟೋ ರಿಕ್ಷಾವನ್ನು ಬಸ್‌ಗೆ ಅಡ್ಡವಾಗಿ ಇಟ್ಟು ನನ್ನನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ರಿಕ್ಷಾ ಚಾಲಕ ಮತ್ತು ಇತರರು ಹಲ್ಲೆ ನಡೆಸಿದ್ದಾರೆ.
ಗಲಾಟೆಯನ್ನು ಬಿಡಿಸಲು ಹೋದ ಪ್ರಯಾಣಿಕರಿಗೂ ಹಲ್ಲೆ ನಡೆಸಲಾಗಿದೆ” ಎಂದು ರಾಕೇಶ್ ಡಿ’ಸೋಜ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಗಾಯಾಳು ಬಸ್ ಚಾಲಕ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


























