ಬಂಟ್ವಾಳ: ಸ್ಕೂಟರ್ ಜಾರಿ ಬಿದ್ದು ಸವಾರರೋರ್ವರು ಮೃತಪಟ್ಟ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯ ರಾಮಲ್ ಕಟ್ಟೆಯ ಬ್ರಹ್ಮರಕೂಟ್ಟು ಟೋಲ್ ಗೇಟ್ ಸಮೀಪ ಗುರುವಾರ ರಾತ್ರಿ ಸಂಭವಿಸಿದೆ.
ಪಿ.ಸೋಮನಾಥ ಪ್ರಭು (65) ಮೃತಪಟ್ಟ ವ್ಯಕ್ತಿ. ಇವರು ಅವಿವಾಹಿತರಾಗಿದ್ದು ಬಂಟ್ವಾಳದ ದೈವಗುಡ್ಡೆ ನಿವಾಸಿ.
ಮಂಗಳೂರು ಕಡೆಯಿಂದ ಬಿಸಿರೋಡು ಕಡೆಗೆ ಅವರು ಸ್ಕೂಟರ್ ನಲ್ಲಿ ಬರುವ ಸಂದರ್ಭದಲ್ಲಿ ಟೋಲ್ ಗೇಟ್ ಸಮೀಪ ಜಾರಿ ಬಿದ್ದಾಗ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು. ತತ್ ಕ್ಷಣವೇ ಅವರನ್ನು ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅವರು ಛಾಯಾ ಚಿತ್ರ ಗ್ರಾಹಕರಾಗಿ ಸೇವೆ ಸಲ್ಲಿಸುತ್ತಿದ್ದರು. ಜತೆಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಣತಿ ಹೊಂದಿದ್ದರು.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



























