ಮಂಗಳೂರು ನಗರದ ಹೊರವಲಯದ ಪ್ರಮುಖ ಹೆದ್ದಾರಿ ಜಂಕ್ಷನ್‌ಗಳಾದ ಬೈಕಂಪಾಡಿ ಮತ್ತು ಕೂಳೂರು ಬಳಿ ಸುಗಮ ಸಂಚಾರ ಹಾಗೂ ಅಪಘಾತ ಮುಕ್ತ ವಲಯ ನಿರ್ಮಾಣ ಮಾಡುವ ನಿಟ್ಟಿನಲ್ಲಿ ರಾ.ಹೆ. 66ರಲ್ಲಿ ಬರುವ ಈ ಎರಡು ಪ್ರಮುಖ ಜಂಕ್ಷನ್‌ನಲ್ಲಿ ವಾಹನಗಳ ಸುಗಮ ಸಂಚಾರಕ್ಕಾಗಿ ಅಂಡರ್‌ಪಾಸ್ ನಿರ್ಮಾಣಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಒಟ್ಟು 11.63 ಕೋಟಿ ರೂ. ಅಧಿಕ ಅನುದಾನ ಬಿಡುಗಡೆ ಮಾಡಿದೆ ಎಂದು ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಬ್ಲ್ಯಾಕ್ ಸ್ಪಾಟ್ ಆಗಿ ಮಾರ್ಪಟ್ಟಿದ್ದ ಬೈಕಂಪಾಡಿ ಜಂಕ್ಷನ್ ಸುಗಮ ಹಾಗೂ ಸುರಕ್ಷಿತ ವಾಹನ ಸಂಚಾರಕ್ಕೆ ಸಾರ್ವಜನಿಕರಿಂದ ಹಾಗೂ ವಾಹನ ಸವಾರರಿಂದ ಬೇಡಿಕೆ ಕೇಳಿಬಂದಿತ್ತು. ಇದಕ್ಕೆ ಪರಿಹಾರವಾಗಿ ಹಾಗೂ ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ತೆರಳುವ ವಾಹನಗಳ ಅನುಕೂಲಕ್ಕಾಗಿ ಬೈಕಂಪಾಡಿ ಜಂಕ್ಷನ್‌ನಲ್ಲಿ 7.09 ಕೋಟಿ ರೂ. ವೆಚ್ಚದಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಹೆದ್ದಾರಿ ಸಚಿವಾಲಯ ಅನುಮೋದನೆ ನೀಡಿದೆ.
ಈ ಅಂಡರ್ ಪಾಸ್ ನಿರ್ಮಾಣದಿಂದಾಗಿ ವಾಹನಗಳು ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ ತಿರುವು ಪಡೆಯುವ ಬದಲು, ಸುರಕ್ಷಿತವಾಗಿ ಅಂಡರ್‌ಪಾಸ್ ಮೂಲಕವೇ ಕೈಗಾರಿಕಾ ಪ್ರದೇಶದ ಕಡೆಗೆ ಚಲಿಸಬಹುದಾಗಿದೆ. ಕೆ.ಐ.ಒ.ಸಿ.ಎಲ್ ಜಂಕ್ಷನ್ ಮತ್ತು ಕೂಳೂರು ಸೇತುವೆ ಬಳಿ 4.54 ಕೋಟಿ ರೂ. ವೆಚ್ಚದಲ್ಲಿ ಅಂಡರ್‌ಪಾಸ್ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ.
ಈ ಭಾಗದಲ್ಲಿ ಅಂಡರ್‌ಪಾಸ್ ನಿರ್ಮಿಸುವುದರಿಂದ ತಣ್ಣೀರುಬಾವಿ ಬೀಚ್ ಹಾಗೂ ಎಂ.ಎಸ್.ಇ.ಝಡ್ ಕಡೆಗೆ ಚಲಿಸುವ ವಾಹನಗಳ ದಟ್ಟಣೆಯನ್ನು ನಿವಾರಿಸಲು, ಸುಗಮ ಸಂಚಾರ ಕಲ್ಪಿಸಲು ಯೋಜನೆ ಸಹಕಾರಿಯಾಗಲಿದೆ.



























