ಪುತ್ತೂರು: ಬನ್ನೂರು ಗೋಳ್ತಿಲ ನಿವಾಸಿ ಉಮ್ಮಣ್ಣ ಗೌಡರ ಪುತ್ರ ಹಾಗೂ ಒಕ್ಕಲಿಗ ಗೌಡ ಸೇವಾ ಸಂಘದ ಬನ್ನೂರು ಗ್ರಾಮದ ಅಧ್ಯಕ್ಷ, ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರಾಗಿದ್ದ ಸೂರಜ್ (50) ಅವರು ಜೂನ್ 11ರಂದು ನಸುಕಿನ ಜಾವ ನಿಧನರಾದರು.
ಮಾಹಿತಿಯ ಪ್ರಕಾರ, ಸೂರಜ್ ಅವರು ಬುಧವಾರ ರಾತ್ರಿ ಊಟ ಮಾಡಿ ಮಲಗಿದ್ದು, ಗುರುವಾರ ಬೆಳಗ್ಗೆ ಎದ್ದಿರಲಿಲ್ಲ. ಕುಟುಂಬಸ್ಥರು ಪರಿಶೀಲಿಸಿದಾಗ ಅವರು ಮೃತಪಟ್ಟಿರುವುದು ತಿಳಿದುಬಂದಿದೆ. ಅವರ ಅಕಾಲಿಕ ನಿಧನವು ಕುಟುಂಬಸ್ಥರು, ಬಂಧುಬಳಗ ಹಾಗೂ ಗ್ರಾಮಸ್ಥರಲ್ಲಿ ದುಃಖದ ವಾತಾವರಣವನ್ನುಂಟು ಮಾಡಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸಾವಿನ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ವರದಿ ಬಳಿಕ ತಿಳಿಯುವ ಸಾಧ್ಯತೆಯಿದೆ.
ಮೃತರು ತಂದೆ ಉಮ್ಮಣ್ಣ ಗೌಡ, ತಾಯಿ, ಪತ್ನಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
ಸೂರಜ್ ಅವರ ನಿಧನಕ್ಕೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ರಾಜಕೀಯ ನಾಯಕರು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.



























