ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ಇದರ ಸಾರಥ್ಯದಲ್ಲಿ ನಡೆಯಲಿರುವ ತೃತೀಯ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಮೇ 31ರಂದು ಮುಕ್ರಂಪಾಡಿಯ ಸುಭದ್ರಾ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಸಭೆಯಲ್ಲಿ ಆಗಸ್ಟ್ 28, 2026ರಂದು ಮುಕ್ರಂಪಾಡಿಯ ಸುಭದ್ರಾ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯನ್ನು ಅತ್ಯಂತ ಭಕ್ತಿಭಾವ ಹಾಗೂ ಅದ್ದೂರಿಯಿಂದ ಆಯೋಜಿಸುವುದಾಗಿ ತೀರ್ಮಾನಿಸಲಾಯಿತು. ಈ ಬಾರಿ 10 ಸಾವಿರಕ್ಕೂ ಅಧಿಕ ಪೂಜಾ ಸೇವೆಗಳನ್ನು ನಡೆಸುವ ಗುರಿಯನ್ನು ಹೊಂದಲಾಗಿದ್ದು, ಪ್ರತಿಯೊಬ್ಬ ಸೇವಾಕರ್ತರಿಗೆ ಪ್ರಸಾದ ರೂಪದಲ್ಲಿ ಸೀರೆ, ರವಿಕೆ ಕಣ, ಬಳೆ, ಅರಿಶಿನ ಹಾಗೂ ಕುಂಕುಮ ವಿತರಿಸುವ ನಿರ್ಧಾರ ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಭಕ್ತಾದಿಗಳಿಗೆ ಅನ್ನಪ್ರಸಾದ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು ಎಂದು ತಿಳಿಸಲಾಯಿತು.
ಸಭೆಯಲ್ಲಿ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಗೌರವಾಧ್ಯಕ್ಷೆಯರಾಗಿ ಶ್ರೀಮತಿ ಪ್ರತಿಭಾ ಓಕುಣ್ಣಾಯ (ಬೊಳ್ಳಿಂಬಳ) ಹಾಗೂ ಶ್ರೀಮತಿ ರಜತಾ ಭಟ್ (ಮುಕ್ರಂಪಾಡಿ) ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷೆಯಾಗಿ ಶ್ರೀಮತಿ ವೀಣಾ ಬಲ್ಲಾಳ್, ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀಮತಿ ಪವಿತ್ರಾ ದೊಡ್ಡಡ್ಕ ಹಾಗೂ ಶ್ರೀಮತಿ ಸ್ವಯಂಪ್ರಭಾ ಅವರನ್ನು ನೇಮಕಗೊಳಿಸಲಾಯಿತು.
ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಗೌರವ ಸಲಹೆಗಾರರಾಗಿ ಪ್ರೇಮಾ ರಾಧಾಕೃಷ್ಣ ರೈ, ಶಶಿಕಲಾ ಮುಕ್ರಂಪಾಡಿ, ಆಮಿತಾ ಆರ್. ಶೆಟ್ಟಿ ನುಳಿಯಾಲು, ಸರಿತಾ ಗಣಪತಿ ನಾಯಕ್, ಪ್ರೇಮಾ ಮೊನಪ್ಪ ಗೌಡ ಮುಂಡೂರು, ಮಲ್ಲಿಕಾ ಪ್ರಸಾದ್ ಕನ್ನಯ ಹಾಗೂ ರೇವತಿ ರೈ ಅವರನ್ನು ನೇಮಕ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಅನ್ನಪೂರ್ಣ ಜೆ. ರಾವ್, ವಿನಯ ಕೆಮ್ಮಿಂಜ, ಅರುಣಾ ಅನಿಲ್ ಕಣ್ಣರ್ನೂಜಿ, ಅನ್ನಪೂರ್ಣ ಬಲ್ಲಾಳ್, ಕಿಶೋರಿ ಕಿಶೋರ್, ನಿಶಿತಾ ನಾಯಕ್, ಅರುಣಾ ಸನಿಲ್, ಸ್ವಪ್ನ ಜೀವನ್ ನೆಕ್ಕಿಲಾಡಿ, ಗೀತಾ ಕುರೆಮಜಲು, ವೀಣಾ ಪರ್ಲಡ್ಕ, ಜ್ಯೋತಿ ಎಸ್. ರಾವ್, ಪುಷ್ಪಾ ರಾಜೇಶ್, ಶೃತಿ ಗಿರೀಶ್, ಪುಷ್ಪ ಕಲ್ಲರ್ಪೆ ಹಾಗೂ ಅಶ್ವಿನಿ ಕಲ್ಲರ್ಪೆ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಗಳಾಗಿ ರತ್ನಾ ನಾಯರ್, ಸ್ವಾತಿ ಶ್ಯಾಮ್, ಸುಕನ್ಯಾ ನೇರಾಜೆ ಹಾಗೂ ಸುಲೋಚನಾ ಪಾಣಾಜೆ ಅವರನ್ನು ನೇಮಿಸಲಾಯಿತು. ಅಲಂಕಾರ ಸಮಿತಿ ಮತ್ತು ಅನ್ನಸಂತರ್ಪಣಾ ಸಮಿತಿಗಳಿಗೆ ಸಹ ಹಲವು ಮಹಿಳಾ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ತಾಲೂಕಿನ ವಿವಿಧ ಬೂತುಗಳ ಟ್ರಸ್ಟ್‌ಗಳ ಮಹಿಳಾ ಸಮಿತಿಯ ತಾಯಂದಿರನ್ನೂ ಸದಸ್ಯರಾಗಿ ಜೋಡಿಸಿಕೊಳ್ಳಲು ತೀರ್ಮಾನಿಸಲಾಯಿತು.
ಟ್ರಸ್ಟ್‌ನ ಸಂಚಾಲಕರು, ಅಧ್ಯಕ್ಷರು ಹಾಗೂ ನಿರ್ದೇಶಕರ ಸಮ್ಮುಖದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ವರಮಹಾಲಕ್ಷ್ಮಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ಪ್ರೇಮಾ ರಾಧಾಕೃಷ್ಣ ರೈ ವಹಿಸಿದ್ದರು. ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಲು ಎಲ್ಲರೂ ಸಹಕಾರ ನೀಡುವಂತೆ ಸಭೆಯಲ್ಲಿ ಕರೆ ನೀಡಲಾಯಿತು.


























