ಪುತ್ತೂರು: ಗಂಡ ಮತ್ತು ಅವರ ಮೂವರು ಸಂಬಂಧಿಕರು ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಮಹಿಳೆ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನೆಟ್ಟಣಿಗೆ ಮುಡ್ನೂರು ಕಲ್ಲುಗುಡ್ಡೆ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಅವರ ಪತ್ನಿ, ಪ್ರಸ್ತುತ ತಂದೆ ಮನೆಯಾದ ಸುಳ್ಯ ಜಯನಗರದಲ್ಲಿ ವಾಸ್ತವ್ಯ ಹೊಂದಿರುವ ಫಾತೀಮಾತ್ ಅನೀಸ ಅವರು ದೂರು ನೀಡಿದವರು.
‘2020ರ ಮಾ.12ರಂದು ನೆಟ್ಟಣಿಗೆ ಮುಡ್ನೂರು ಕಲ್ಲುಗುಡ್ಡೆಯ ಅಬೂಬಕ್ಕರ್ ಸಿದ್ದಿಕ್ ಅವರೊಂದಿಗೆ ತನ್ನ ವಿವಾಹವಾಗಿತ್ತು.ಬಳಿಕ ಗಂಡ ಕೇರಳಕ್ಕೆ ಕೆಲಸಕ್ಕೆ ಹೋಗಿದ್ದರು. 2022ರಲ್ಲಿ ನಾನು ಹೆಣ್ಣುಮಗುವಿಗೆ ಜನ್ಮ ನೀಡಿದ್ದು ಬಾಣಂತನ ಮುಗಿಸಿ ಗಂಡನ ಮನೆಗೆ ಹೋದ ಸಂದರ್ಭ ಮನೆಯಲ್ಲಿದ್ದ ರಮ್ಲಾ ಮತ್ತು ನೆಬ್ಬಿಸಾ ಅವರು ಮಾನಸಿಕ ಕಿರುಕುಳ ನೀಡುತ್ತಿದ್ದರು.
ಈ ಕುರಿತು ಪತಿಗೆ ತಿಳಿಸಿದರೂ ಪ್ರಯೋಜನವಾಗಿರಲಿಲ್ಲ.2023ರಲ್ಲಿ ಪತಿ ವಿದೇಶಕ್ಕೆ ಹೋಗಿದ್ದ ಸಂದರ್ಭ ರಮ್ಲಾ ಮತ್ತು ನೆಬ್ಬಿಸಾ ಅವರ ಜೊತೆ ಕೇರಳದ ಜುವಾರಿಯ ಅವರು ಕೂಡಾ ನನಗೆ ಮಾನಸಿಕ ಕಿರುಕುಳ ನೀಡಿ ಗಂಡನ ಮನೆಗೆ ಬರಬಾರದು ಎಂದು ತಿಳಿಸಿದ್ದರು’ ಎಂದು ಫಾತಿಮಾತ್ ಅನಿಸಾ ಅವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸುಳ್ಯ ಪೊಲೀಸ್ ಠಾಣೆಯಿಂದ ಪ್ರಕರಣ ಇದೀಗ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ದಾಖಲಾಗಿದೆ.

























