ಕೊಕ್ಕಡ, ಜೂ.16: ಬೆಳ್ತಂಗಡಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಮನೆಯ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಕೊಕ್ಕಡ ಗ್ರಾಮದ ಹಳ್ಳಿಂಗೇರಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಧಾರವಾಡ ಜಿಲ್ಲೆಯ ಹಿರೇಗುಂಜಲ್-ಚಿಕ್ಕಗುಂಜಲ್ ಮೂಲದ ರಮೇಶ್ ಅವರ ಪುತ್ರಿ ಶ್ವೇತಾ (18) ಎಂದು ಗುರುತಿಸಲಾಗಿದೆ. ಕಳೆದ ಐದು ವರ್ಷಗಳಿಂದ ಕುಟುಂಬವು ಕೊಕ್ಕಡ ಸಮೀಪದ ಹಳ್ಳಿಂಗೇರಿಯಲ್ಲಿ ನೆಲೆಸಿದ್ದು, ತಂದೆ-ತಾಯಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಲಭ್ಯ ಮಾಹಿತಿಯ ಪ್ರಕಾರ, ಶ್ವೇತಾ ಎಂದಿನಂತೆ ಬೆಳಗ್ಗೆ ಎದ್ದು ಕಾಲೇಜಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದರು. ಘಟನೆ ನಡೆದ ವೇಳೆ ತಂದೆ ಕೆಲಸದ ನಿಮಿತ್ತ ಹೊರಗಡೆ ತೆರಳಿದ್ದರೆ, ತಾಯಿ ಮನೆಯಲ್ಲಿ ಇದ್ದರು ಎನ್ನಲಾಗಿದೆ. ಈ ನಡುವೆ ಮನೆಯ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶ್ವೇತಾ ಪತ್ತೆಯಾಗಿದ್ದಾರೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಸಂಬಂಧಿಕರು ಮನೆಗೆ ಧಾವಿಸಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಿನ ಕಾರಣ ಕುರಿತು ತನಿಖೆ ಮುಂದುವರಿದಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.


























