ಸುಳ್ಯ: ಸೋಮವಾರ ಸುರಿದ ಭಾರೀ ಗಾಳಿ-ಮಳೆಯ ಪರಿಣಾಮವಾಗಿ ತೆಂಗಿನ ಮರವೊಂದು ತುಂಡಾಗಿ ಮನೆಯ ಅಂಗಳಕ್ಕೆ ಬಿದ್ದ ಘಟನೆ ಸುಳ್ಯದ ಪೈಚಾರು ಪ್ರದೇಶದಲ್ಲಿ ನಡೆದಿದೆ. ಘಟನೆಯ ವೇಳೆ ಅಂಗಳದಲ್ಲಿದ್ದ ವ್ಯಕ್ತಿಯೊಬ್ಬರು ಕ್ಷಣಾರ್ಧದಲ್ಲಿ ಸ್ಥಳದಿಂದ ಸರಿದು ಅಪಾಯದಿಂದ ಪಾರಾಗಿದ್ದಾರೆ.
ಪೈಚಾರು ನಿವಾಸಿ ಶಾಫಿ ಪ್ರಗತಿ ಅವರ ಮನೆಯ ಮುಂಭಾಗದಲ್ಲಿದ್ದ ತೆಂಗಿನ ಮರ ಬಿರುಗಾಳಿಯ ಹೊಡೆತಕ್ಕೆ ತುಂಡಾಗಿ ಮನೆಯ ಸಮೀಪಕ್ಕೆ ಉರುಳಿದೆ. ಆ ಸಂದರ್ಭದಲ್ಲಿ ಮನೆಯ ಸ್ಲಾಬ್‌ನಿಂದ ಹರಿದು ಬರುತ್ತಿದ್ದ ಮಳೆನೀರನ್ನು ಬಕೆಟ್‌ನಲ್ಲಿ ಸಂಗ್ರಹಿಸುತ್ತಿದ್ದ ಶಾಫಿ ಪ್ರಗತಿ ಅವರ ಸಹೋದರ ಹಸೈನಾರ್ ಅಂಗಳದಲ್ಲಿದ್ದರು. ಮರ ಬೀಳುತ್ತಿರುವುದನ್ನು ಗಮನಿಸಿದ ಅವರು ತಕ್ಷಣ ಅಲ್ಲಿಂದ ಓಡಿ ಸುರಕ್ಷಿತ ಸ್ಥಳಕ್ಕೆ ತೆರಳಿದ್ದು, ಸಂಭವಿಸಬಹುದಾದ ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ.
ಘಟನೆಯಿಂದ ಮನೆಯ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಮರ ಬಿದ್ದ ಪರಿಣಾಮ ಸ್ವಲ್ಪ ಮಟ್ಟಿನ ಹಾನಿಯೂ ಉಂಟಾಗಿದೆ ಎಂದು ತಿಳಿದುಬಂದಿದೆ.

























