ಬೆಳ್ತಂಗಡಿ, ಜು. 31: ಬೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು ₹7.60 ಲಕ್ಷ ಮೌಲ್ಯದ 76.59 ಗ್ರಾಂ ಎಂಡಿಎಂಎ ಹಾಗೂ 27 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಜುಲೈ 29ರಂದು ರಾತ್ರಿ ಪೊಲೀಸ್ ಉಪನಿರೀಕ್ಷಕ ಆನಂದ ಎಂ ನೇತೃತ್ವದಲ್ಲಿ ಸಿಬ್ಬಂದಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಪ್ರದೇಶದಲ್ಲಿ KA-18 A-7203 ಸಂಖ್ಯೆಯ ಆಟೋ ರಿಕ್ಷಾ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯನ್ನು ತಡೆದು ವಿಚಾರಣೆ ನಡೆಸಲಾಯಿತು.
ಬಂಧಿತನನ್ನು ಕುವೆಟ್ಟು ನಿವಾಸಿ ತ್ವಲಹ್ ಅಲಿಯಾಸ್ ಅನ್ವರ್ ಅಲಿಯಾಸ್ ಅನ್ಸರ್ (21) ಎಂದು ಗುರುತಿಸಲಾಗಿದೆ. ಆತನನ್ನು ತಪಾಸಣೆ ನಡೆಸಿದಾಗ 27 ಗ್ರಾಂ ಗಾಂಜಾ ಹಾಗೂ ಒಂದು ಮೊಬೈಲ್ ಫೋನ್ ಪತ್ತೆಯಾಯಿತು. ಬಳಿಕ ಸ್ಥಳದಲ್ಲಿದ್ದ ಆಟೋ ರಿಕ್ಷಾ ಮತ್ತು ಕಾರನ್ನು ಪರಿಶೀಲಿಸಿದ ವೇಳೆ ಸುಮಾರು ₹7.60 ಲಕ್ಷ ಮೌಲ್ಯದ 76.59 ಗ್ರಾಂ ತೂಕದ ನಿಷೇಧಿತ ಮಾದಕ ವಸ್ತು ಎಂಡಿಎಂಎ ಪತ್ತೆಯಾಗಿದೆ.
ವಿಚಾರಣೆ ವೇಳೆ, ಮಾದಕ ವಸ್ತು ಪೂರೈಸಲು ಬಂದಿದ್ದ ಮತ್ತೋರ್ವ ಆರೋಪಿ ಅಮ್ಜತ್ ಖರಾರ್ ಎಂಬಾತ KA-21 MA-4990 ಸಂಖ್ಯೆಯ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಪರಾರಿಯಾದ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 82/2026ರಡಿ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(c), 20(b)(ii)(A), 22(c) ಹಾಗೂ 27A ಅನ್ವಯ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.



























