ಪುತ್ತೂರು: ಪುತ್ತೂರು ನಗರದ ಎ.ಪಿ.ಎಂ.ಸಿ. ಕ್ರಾಸ್ ರಸ್ತೆ ಸಮೀಪ ಇರುವ ಆಟೋ ರಿಕ್ಷಾ ನಿಲ್ದಾಣವನ್ನು ಮುಂದುವರಿಸಲು ಅವಕಾಶ ನೀಡುವಂತೆ ಆಟೋ ಚಾಲಕ ಹಾಗೂ ಮಾಲಕರು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ, ಪುತ್ತೂರು ನಗರಸಭಾ ವ್ಯಾಪ್ತಿಯ ಎ.ಪಿ.ಎಂ.ಸಿ. ಕ್ರಾಸ್ ರಸ್ತೆಯ ಎಡಭಾಗದಲ್ಲಿರುವ ಸರ್ಕಾರಿ ಬಾವಿ ಸಮೀಪದ ಸ್ಥಳವನ್ನು ಜಿಲ್ಲಾಧಿಕಾರಿಗಳು 15-04-2015ರಂದು ಆಟೋ ರಿಕ್ಷಾ ನಿಲ್ದಾಣವಾಗಿ ಗುರುತಿಸಿ ಆದೇಶ ನೀಡಿದ್ದರು ಎಂದು ತಿಳಿಸಿದ್ದಾರೆ. ಅದರಂತೆ ಕಳೆದ 11 ವರ್ಷಗಳಿಂದ ಯಾವುದೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಲ್ಲಿಯೇ ಆಟೋಗಳನ್ನು ನಿಲ್ಲಿಸಿ ಬಾಡಿಗೆ ನಡೆಸುತ್ತಾ ಜೀವನ ಸಾಗಿಸುತ್ತಿದ್ದೇವೆ ಎಂದು ಚಾಲಕರು ಹೇಳಿದ್ದಾರೆ.
ಆದರೆ ಕಳೆದ ಎರಡು-ಮೂರು ದಿನಗಳಿಂದ ನಗರಸಭೆಯ ಅಧಿಕಾರಿಗಳು ಯಾವುದೇ ಪೂರ್ವ ಸೂಚನೆ ನೀಡದೆ ಆ ಸ್ಥಳದಲ್ಲಿ ಇನ್ನು ಮುಂದೆ ಆಟೋ ಪಾರ್ಕಿಂಗ್ ಮಾಡಲು ಅವಕಾಶವಿಲ್ಲ ಎಂದು ಮೌಖಿಕವಾಗಿ ತಿಳಿಸಿರುವುದಾಗಿ ಆರೋಪಿಸಿದ್ದಾರೆ. ಇದರಿಂದ ತಮ್ಮ ಜೀವನೋಪಾಯಕ್ಕೆ ತೊಂದರೆಯಾಗುವ ಆತಂಕ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ಪೊಲೀಸರು ಕೂಡ ಆಗಾಗ್ಗೆ ಬಂದು ಆ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಬಾರದೆಂದು ಸೂಚನೆ ನೀಡುತ್ತಿರುವುದರಿಂದ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಆದ್ದರಿಂದ, 2015ರಿಂದ ಚಾಲ್ತಿಯಲ್ಲಿರುವ ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಗುರುತಿಸಲ್ಪಟ್ಟಿರುವ ಆಟೋ ರಿಕ್ಷಾ ಪಾರ್ಕಿಂಗ್ ಸ್ಥಳವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿ, ಬಡ ಆಟೋ ಚಾಲಕರ ಜೀವನೋಪಾಯಕ್ಕೆ ನೆರವಾಗುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಸಂಸದರಿಗೆ ಮನವಿ ಮಾಡಿದ್ದಾರೆ.



























