ಪುತ್ತೂರು: ಪುತ್ತೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ದೇವಸ್ಥಾನದ ಜಾಗದಲ್ಲಿ ಸಾರ್ವಜನಿಕ ರಸ್ತೆ ನಿರ್ಮಾಣಕ್ಕೆ ಕೈಗೊಂಡಿರುವ ಯೋಜನೆ, ನಾಗ, ಅಯ್ಯಪ್ಪ ಹಾಗೂ ನವಗ್ರಹ ಗುಡಿಗಳನ್ನು ಸ್ಥಳಾಂತರಿಸಿರುವುದು ಮತ್ತು ನಟರಾಜ ವೇದಿಕೆಯನ್ನು ತೆರವುಗೊಳಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಭಕ್ತರಲ್ಲಿ ಉಂಟಾಗಿರುವ ಗೊಂದಲದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷದ್ (ವಿಹಿಂಪ) ಪುತ್ತೂರು ಜಿಲ್ಲೆ ವತಿಯಿಂದ ಭಾನುವಾರ ಪ್ರಮುಖರ ಸಭೆ ನಡೆಯಿತು.
ಕಲ್ಲಾರೆ ಶ್ರೀ ರಾಘವೇಂದ್ರ ಮಠದಲ್ಲಿ ನಡೆದ ಸಭೆಯಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ಪ್ರಮುಖ ವಿಚಾರಗಳಲ್ಲಿ ಭಕ್ತರ ಭಾವನೆಗಳಿಗೆ ಆದ್ಯತೆ ನೀಡಬೇಕು ಹಾಗೂ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ದೇವಸ್ಥಾನದ ಆಡಳಿತ ಮಂಡಳಿ ಭಕ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತವಾಯಿತು.
ಸಭೆಯಲ್ಲಿ ಚರ್ಚಿಸಿದ ವಿಷಯಗಳ ಹಿನ್ನೆಲೆಯಲ್ಲಿ, ದೇವಸ್ಥಾನದ ಜಾಗದಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಆಡಳಿತ ಮಂಡಳಿಗೆ ಹಲವು ಬೇಡಿಕೆಗಳನ್ನು ಆಗ್ರಹಿಸಿ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ಅದರಂತೆ, ಸೋಮವಾರ (ಆಗಸ್ಟ್ 3) ಬೆಳಿಗ್ಗೆ 10 ಗಂಟೆಗೆ ದೇವಸ್ಥಾನದ ಆಡಳಿತ ಮಂಡಳಿಗೆ ಸಾಮೂಹಿಕವಾಗಿ ಮನವಿ ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.



























