ವಿಟ್ಲ: ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯಾಗುವಂತಹ ಆಕ್ಷೇಪಾರ್ಹ ಕಾಮೆಂಟ್ ಮಾಡಿದ ಆರೋಪದಡಿ ವಿಟ್ಲ ಠಾಣೆ ಪೊಲೀಸರು ಬೆಂಗಳೂರಿನ ವಿದ್ಯಮಾನ್ಯ ನಗರ ನಿವಾಸಿ ಆನಂದ್ ಎ. ಅವರನ್ನು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಫೇಸ್‌ಬುಕ್‌ನ “ಸನಾತನಿ ಸಿಂಹ” ಎಂಬ ಪೇಜ್‌ನಲ್ಲಿ ಪ್ರಸಾರವಾಗಿದ್ದ ಪೋಸ್ಟ್‌ಗೆ ಆರೋಪಿತನು ಕೋಮು ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ರೀತಿಯ ಕಾಮೆಂಟ್ ಮಾಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ 2025ರ ಸೆಪ್ಟೆಂಬರ್ 18ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 131/2025ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 353(2)ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿತ್ತು.
ತನಿಖೆಯ ಬಳಿಕ ಆರೋಪಿತ ಆನಂದ್ ಎ. ಅವರನ್ನು 2026ರ ಜೂನ್ 27ರಂದು ಬಂಧಿಸಿದ ಪೊಲೀಸರು, ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಆರೋಪಿತನ ವಿರುದ್ಧ ಈ ಹಿಂದೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ವಿಷಯಗಳನ್ನು ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು ಏಳು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಕುರಿತು ವಿಟ್ಲ ಠಾಣೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.



























