ವಿಟ್ಲ: ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಹಾಗೂ ಕೋಮುಸೌಹಾರ್ದತೆಗೆ ಧಕ್ಕೆ ತರುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಯತೀಶ್ ಎ. ಎಂಬವರ ವಿರುದ್ಧ ಗಡಿಪಾರು ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ. ರವರು ಈ ನೋಟಿಸ್ ಜಾರಿಗೊಳಿಸಿದ್ದು, ಜು. 15ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಅಶ್ವಥ ನಗರ ನಿವಾಸಿಯಾದ ಯತೀಶ್ ಎ. ಎಂಬವರಿಗೆ ಈ ನೋಟಿಸ್ ನೀಡಲಾಗಿದೆ. ವಿಟ್ಲ ಪೊಲೀಸ್ ಠಾಣೆಯ “ಎ” ರೌಡಿ ಶೀಟರ್ ಆಗಿರುವ ಇವರ ಮೇಲೆ, ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಪೋಸ್ಟ್‌ಗಳನ್ನು ಹಾಕಿ ಧರ್ಮಗಳ ನಡುವೆ ಗಲಭೆ ಸೃಷ್ಟಿಸಲು ಯತ್ನಿಸುತ್ತಿರುವ ಗಂಭೀರ ಆರೋಪವಿದೆ.
ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟ ಉಂಟುಮಾಡುವ ಹಾಗೂ ಶಾಂತಿ ಕದಡುವ ಸಾಧ್ಯತೆ ಇರುವುದರಿಂದ, ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 55(ಎ) ಮತ್ತು 55(ಬಿ) ಅಡಿಯಲ್ಲಿ ಅವರನ್ನು ಜಿಲ್ಲೆಯಿಂದ ನಿರ್ದಿಷ್ಟ ಅವಧಿಗೆ ಗಡಿಪಾರು ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಈ ಎಲ್ಲಾ ಆರೋಪಗಳಿಗೆ ಸಂಬಂಧಿಸಿದಂತೆ ಮುಂಬರುವ 15-07-2026 ರಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿ ಲಿಖಿತ ವಿವರಣೆ ಅಥವಾ ತಕರಾರು ಸಲ್ಲಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ನೀಡಿರುವ ನೋಟಿಸ್‌ನಲ್ಲಿ ಆದೇಶಿಸಿದ್ದಾರೆ.


























