ಉಡುಪಿ: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಹೂಡಿಕೆ ಹೆಸರಿನಲ್ಲಿ 70 ಲಕ್ಷ ರೂ. ವಂಚನೆ ಮಾಡಿರುವ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಝೀನತ್ ಇಬ್ರಾಹಿಂ ಬಂಧಿತ ಮಹಿಳೆ. ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಪರಿಚಯ ಮಾಡಿಕೊಂಡಿದ್ದ ಮಹಿಳೆ, ಜಂಟಿಯಾಗಿ ಕಚೇರಿ ಆರಂಭಿಸಿದ್ದಳು. ಅಲ್ಲದೇ ಜಮೀನು ಖರೀದಿ ಹೆಸರಿನಲ್ಲಿ 70 ಲಕ್ಷ ರೂ. ಹಣ ಪಡೆದಿದ್ದಳು. ಬಳಿಕ ಆ ಹಣವನ್ನು ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡಿದ್ದಾಳೆ ಎನ್ನಲಾಗಿದೆ.
ಉದ್ಯಮಿ ಹಣ ವಾಪಸ್ ಕೇಳಿದಾಗ, ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಮಹಿಳೆ ಬೆದರಿಸಿದ್ದಾಳೆ. ಅಶ್ಲೀಲ ವಿಡಿಯೋಗಳ ಹೆಸರಿನಲ್ಲಿ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಅಲ್ಲದೇ ಪತ್ನಿ ಹಾಗೂ ಮಕ್ಕಳನ್ನು ಅಪಹರಿಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿಯನ್ನು ನ್ಯಾಯಾಲಯ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.


























