ಕಡಬ: ಬಿಳಿನೆಲೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಚಂದ್ರಾವತಿ ಅವರು ತಮ್ಮ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಮಾನಹಾನಿ ಮಾಡುವ ಉದ್ದೇಶದಿಂದ ನಿರಂತರವಾಗಿ ಕಿರುಕುಳ ನೀಡುತ್ತಿರುವ ಆರೋಪದಡಿ ಮೂವರ ವಿರುದ್ಧ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಳೆದ ಸುಮಾರು 11 ತಿಂಗಳಿನಿಂದ ನೆಟ್ಟಣ ವಾರ್ಡ್ ನಿವಾಸಿಗಳಾದ ಪ್ರಸಾದ್ ಕೆ.ಜಿ., ಜೂಲಿಯಾನ ಹಾಗೂ ರೈಲ್ವೆ ನಿಲ್ದಾಣ ಸಮೀಪದ ಸಜಿತ್ ಕುಮಾರ್ ಅವರು ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ಪದೇಪದೇ ದೂರುಗಳು, ಮಾಹಿತಿ ಹಕ್ಕು ಅರ್ಜಿಗಳು, ವಾಟ್ಸಾಪ್ ಸಂದೇಶಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮನ್ನು ಗುರಿಯಾಗಿಸಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಟ್ಟಡ ನಿರ್ಮಾಣ ಪರವಾನಿಗೆ, ಖಾಸಗಿ ಜಮೀನಿಗೆ ಸಾರ್ವಜನಿಕ ರಸ್ತೆ ದೃಢೀಕರಣ ಹಾಗೂ ವಾಣಿಜ್ಯ ಪರವಾನಿಗೆ ಸಂಬಂಧಿಸಿದ ಅರ್ಜಿಗಳಿಗೆ ಕಾನೂನುಬದ್ದ ದಾಖಲೆಗಳ ಕೊರತೆಯಿಂದ ಅನುಮತಿ ನೀಡಲಾಗದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ದ್ವೇಷ ಸಾಧಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇದೇ ವೇಳೆ, ನಮ್ಮ ಗ್ರಾಮ ಬಿಳಿನೆಲೆ, ನಮ್ಮ ವಾರ್ಡ್ ನಮ್ಮ ಹೊಣೆ ಎಂಬ ವಾಟ್ಸಾಪ್ ಗುಂಪು ರಚಿಸಿ ತಮ್ಮ ಮೊಬೈಲ್ ಸಂಖ್ಯೆಯನ್ನು ಅನುಮತಿಯಿಲ್ಲದೆ ಸೇರಿಸಿ, ಅಧಿಕಾರಿಗಳು ಗ್ರೂಪ್ ತೊರೆದರೆ ಕಚೇರಿಗೆ ಬಂದು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಜುಲೈ 8ರಂದು ಪಂಚಾಯತ್ ಕಚೇರಿಗೆ ಆಗಮಿಸಿದ ಆರೋಪಿಗಳು ತಮ್ಮನ್ನು ಅವಹೇಳನಕಾರಿ ಪದಗಳಿಂದ ನಿಂದಿಸಿ, ಕಚೇರಿಯೊಳಗೆ ವೀಡಿಯೊ ಚಿತ್ರೀಕರಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರ ಎದುರು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಹಾನಿ ಮಾಡಿರುವುದಾಗಿಯೂ ಆರೋಪಿಸಲಾಗಿದೆ.
ಈ ಬೆಳವಣಿಗೆಗಳಿಂದ ಘನ ತ್ಯಾಜ್ಯ ನಿರ್ವಹಣೆ ಸೇರಿದಂತೆ ಪಂಚಾಯತ್‌ನ ಹಲವು ಸಾರ್ವಜನಿಕ ಸೇವೆಗಳು ಅಡಚಣೆಗೆ ಒಳಗಾಗಿದ್ದು, ಮಹಿಳಾ ಸಿಬ್ಬಂದಿಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಪಿಡಿಒ ತಿಳಿಸಿದ್ದಾರೆ. ಸಂಜೆ ನಂತರವೂ ಮಾಹಿತಿ ನೀಡುವಂತೆ ಒತ್ತಾಯಿಸಿ ಮಹಿಳಾ ಸಿಬ್ಬಂದಿಗೆ ಅಸುರಕ್ಷಿತ ವಾತಾವರಣ ಸೃಷ್ಟಿಸುವ ರೀತಿಯಲ್ಲಿ ವರ್ತಿಸಿರುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರೈಲ್ವೆ ತ್ಯಾಜ್ಯ ನಿರ್ವಹಣೆ ಕುರಿತು ಗ್ರಾಮಸ್ಥರು ಹಾಗೂ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿ, ನಿರಂತರ ಮಾಹಿತಿ ಹಕ್ಕು ಅರ್ಜಿಗಳು ಮತ್ತು ಇ-ಮೇಲ್‌ಗಳ ಮೂಲಕ ಮಾನಸಿಕ ಒತ್ತಡ ಉಂಟು ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕರ್ತವ್ಯಕ್ಕೆ ಅಡ್ಡಿಪಡಿಸಿ, ಮಾನಸಿಕವಾಗಿ ಕಿರುಕುಳ ನೀಡುತ್ತಿರುವ ಪ್ರಸಾದ್ ಕೆ.ಜಿ., ಜೂಲಿಯನ, ಸುಜಿತ್ ಕುಮಾರ್ ಹಾಗೂ ಅವರಿಗೆ ಸಹಕರಿಸುತ್ತಿರುವ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪಿಡಿಒ ಚಂದ್ರಾವತಿ ಅವರು ಪೊಲೀಸರಿಗೆ ದೂರು ನೀಡಿದ್ದರು.


























