ಮಂಗಳೂರು: ಬಿ.ಸಿ.ರೋಡು ಸರ್ಕಾರಿ ಬಸ್ ನಿಲ್ದಾಣದಲ್ಲಿ ಯುವತಿ ಲಾವಣ್ಯ ಅವರ ಹತ್ಯೆ ಪ್ರಕರಣವನ್ನು ಶ್ರೀ ನಾರಾಯಣಗುರು ವಿಚಾರ ವೇದಿಕೆ ತೀವ್ರವಾಗಿ ಖಂಡಿಸಿದೆ. ಹತ್ಯೆ ಯಾರದ್ದೇ ಆಗಿರಲಿ ಅದು ಸಮಾಜಕ್ಕೆ ಅಂಟಿದ ಶಾಪವಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ವೇದಿಕೆ ಆಗ್ರಹಿಸಿದೆ.
ಈ ಕುರಿತು ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಪ್ರಕಟಣೆ ನೀಡಿ, ಹತ್ಯೆ ಘಟನೆಯನ್ನು ನೆಪವನ್ನಾಗಿ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಸಮಾಜದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿರುವುದನ್ನು ವೇದಿಕೆ ಉಗ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.
ಘಟನೆಗೆ ಯಾವುದೇ ಸಂಬಂಧವಿಲ್ಲದ ಬಿಲ್ಲವ ಸಮಾಜದ ಕುರಿತು ತಪ್ಪು ಮಾಹಿತಿ ಹರಡುವುದು ಜಾತಿ-ಜಾತಿಗಳ ನಡುವೆ ವೈಷಮ್ಯ ಮತ್ತು ಅವಿಶ್ವಾಸದ ವಾತಾವರಣ ಸೃಷ್ಟಿಸುವ ಪ್ರಯತ್ನವಾಗಿದೆ. ಇಂತಹ ಅಪಪ್ರಚಾರಗಳು ಸಮಾಜದ ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವಂತಿವೆ ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಈಗಾಗಲೇ ಯುವ ಬಿಲ್ಲವ ಕಾರ್ಕಳ (ರಿ) ಹಾಗೂ ಬಿಲ್ಲವ ಬ್ರಿಗೇಡ್ ಸಂಘಟನೆಗಳು ಸಂಬಂಧಪಟ್ಟ ಇಲಾಖೆಗೆ ದೂರು ಸಲ್ಲಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿರುವುದನ್ನು ಶ್ರೀ ನಾರಾಯಣಗುರು ವಿಚಾರ ವೇದಿಕೆ ಶ್ಲಾಘಿಸಿದೆ.
ಸಮಾಜದ ವಿರುದ್ಧ ಅನ್ಯಾಯವಾದಾಗ ಧ್ವನಿ ಎತ್ತುವುದು ಪ್ರತಿಯೊಂದು ಜಾಗೃತ ಸಂಘಟನೆಯ ಜವಾಬ್ದಾರಿಯಾಗಿದೆ. ಆದ್ದರಿಂದ ಸುಳ್ಳು ಹಾಗೂ ಆಧಾರರಹಿತ ಅಪಪ್ರಚಾರ ನಡೆಸುವವರ ವಿರುದ್ಧ ಸಂಬಂಧಪಟ್ಟ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಂಡು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸತ್ಯಜಿತ್ ಸುರತ್ಕಲ್ ಆಗ್ರಹಿಸಿದ್ದಾರೆ.


























