ಬಂಟ್ವಾಳ, ಜು.17: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಾಗೂ ಸಮಾಜದ ಶಾಂತಿ ಕದಡುವ ಉದ್ದೇಶದ ಪೋಸ್ಟ್‌ಗಳನ್ನು ಪ್ರಸಾರ ಮಾಡಿದ ಆರೋಪದಡಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಬಂಟ್ವಾಳ ನಗರ ಠಾಣೆಯಲ್ಲಿ ಈಗಾಗಲೇ ಅ.ಕ್ರ. 95/2026ರಡಿ BNS-2023ರ ಕಲಂ 78, 126, 103 ಹಾಗೂ ಆರ್ಮ್ಸ್ ಆಕ್ಟ್‌ನ ಕಲಂ 25 ಮತ್ತು 27ರಡಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯ ಭಾವಚಿತ್ರವನ್ನು ಕೇಸರಿ ಶಾಲು ಮತ್ತು ಕುಂಕುಮದೊಂದಿಗೆ ಎಡಿಟ್ ಮಾಡಿ, ಭಜರಂಗದಳದ ಕಾರ್ಯಕರ್ತ ಎಂದು ಬಿಂಬಿಸಿ ವಿವಿಧ ವಾಟ್ಸ್ಆಪ್ ಗುಂಪುಗಳು ಹಾಗೂ ಇನ್‌ಸ್ಟಾಗ್ರಾಂ ಖಾತೆಗಳ ಮೂಲಕ ಸುಳ್ಳು ಮತ್ತು ಪ್ರಚೋದನಾತ್ಮಕ ಬರಹಗಳನ್ನು ಪ್ರಸಾರ ಮಾಡಿರುವ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ troll_master.__ ಇನ್‌ಸ್ಟಾಗ್ರಾಂ ಖಾತೆ, Yuva Belthangady, PPadmaraj Padmarajpari, Padmaraj Padmaraj Pari, Yuva Congress Belthangady ಹಾಗೂ Facts and Justice ವಾಟ್ಸ್ಆಪ್ ಗುಂಪುಗಳ ವಿರುದ್ಧ ಅ.ಕ್ರ. 96/2026ರಡಿ BNS-2023ರ ಕಲಂ 196 ಹಾಗೂ 353(2) ಅನ್ವಯ ಪ್ರಕರಣ ದಾಖಲಾಗಿದೆ.
ಇದಲ್ಲದೆ, Shailaja Amarnath ಎಂಬ ಫೇಸ್‌ಬುಕ್ ಖಾತೆಯಲ್ಲಿ ಸುಳ್ಳು ಹಾಗೂ ಸಮಾಜದ ಶಾಂತಿಗೆ ಧಕ್ಕೆ ತರುವ ರೀತಿಯ ಪೋಸ್ಟ್ ಪ್ರಕಟಿಸಿರುವ ಆರೋಪದಡಿ ಅ.ಕ್ರ. 97/2026ರಡಿ BNS-2023ರ ಕಲಂ 353(2)ರಂತೆ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.
ಅದೇ ರೀತಿ Chethan Belchada ಎಂಬ ಫೇಸ್‌ಬುಕ್ ಖಾತೆಯಲ್ಲಿ ಪ್ರಕರಣದ ಆರೋಪಿಯ ಭಾವಚಿತ್ರವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಎಂದು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಹರಡಿರುವ ಆರೋಪದಡಿ ಅ.ಕ್ರ. 98/2026ರಡಿ BNS-2023ರ ಕಲಂ 353(2)ರಂತೆ ಪ್ರಕರಣ ದಾಖಲಿಸಲಾಗಿದೆ.
ಈ ಮೂರು ಪ್ರಕರಣಗಳನ್ನು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.


























