ಮಂಗಳೂರು: ಒಮಾನ್ ಕರಾವಳಿಯ ಸಮೀಪ ವಾಣಿಜ್ಯ ಹಡಗಿನ ಮೇಲೆ ನಡೆದ ಕ್ಷಿಪಣಿ ದಾಳಿಯ ಬಳಿಕ ಒಮಾನ್ ನೌಕಾಪಡೆಯಿಂದ ರಕ್ಷಿಸಲ್ಪಟ್ಟ 10 ಭಾರತೀಯರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ 25 ವರ್ಷದ ಯುವ ನಾವಿಕ ರಚನ್ ಬಿಳಿಯೂರು ಕೂಡ ಸೇರಿದ್ದಾರೆ.
ಅವರು ಕುಟುಂಬದವರೊಂದಿಗೆ ದೂರವಾಣಿ ಸಂಪರ್ಕದಲ್ಲಿದ್ದು, ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನಲೆ ಅರುಣ್ ಕುಮಾರ್ ಪುತ್ತಿಲ ಅವರು ರಚನ್ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ರಚನ್ ಅವರ ಸುರಕ್ಷತೆ ಕುರಿತು ಕುಟುಂಬದವರಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಸದಸ್ಯರು ಹಾಗೂ ಪುತ್ತಿಲ ಪರಿವಾರ ಪೆರ್ನೆ-ಬಿಳಿಯೂರು ಘಟಕದ ಸದಸ್ಯರು ಉಪಸ್ಥಿತರಿದ್ದರು.


























