ಸುಳ್ಯ: ಮದ್ಯದ ಅಮಲಿನಲ್ಲಿದ್ದ ನಾಲ್ವರು ಸ್ನೇಹಿತರು ಪರಸ್ಪರ ಹೊಡೆದಾಡಿಕೊಂಡು ರಸ್ತೆಯಲ್ಲಿ ಎಳೆದಾಡಿಕೊಂಡ ಘಟನೆ ಜು. 17ರಂದು ಸಂಜೆ ಸುಳ್ಯದ ಬಾಳೆಮಕ್ಕಿ ಟ್ಯಾಕ್ಸಿ ಕಾರು ನಿಲ್ದಾಣದ ಸಮೀಪ ನಡೆದಿದೆ.
ನಾಲ್ವರೂ ಕೂಲಿ ಕಾರ್ಮಿಕರಾಗಿದ್ದು, ದಿನದ ಕೆಲಸ ಮುಗಿಸಿಕೊಂಡು ವಾಪಸಾಗುವ ವೇಳೆ ಮದ್ಯ ಸೇವಿಸಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ವಾಗ್ವಾದ ಆರಂಭವಾಗಿ, ಅದು ಹೊಡೆದಾಟಕ್ಕೆ ತಿರುಗಿದೆ. ಪರಸ್ಪರ ತಳ್ಳಾಟ-ಎಳೆದಾಟ ನಡೆಸಿದ ಅವರು ರಸ್ತೆಯಲ್ಲೇ ಗಲಾಟೆ ನಡೆಸಿದ್ದರಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಘಟನೆಯನ್ನು ಗಮನಿಸಿದ ಸ್ಥಳೀಯ ಟ್ಯಾಕ್ಸಿ ಚಾಲಕರು ತಕ್ಷಣ ಮಧ್ಯಪ್ರವೇಶಿಸಿ ಜಗಳವನ್ನು ನಿಲ್ಲಿಸಿದರು. ಬಳಿಕ ನಾಲ್ವರಿಗೂ ಬುದ್ಧಿಮಾತು ಹೇಳಿ ಸಮಾಧಾನಪಡಿಸಿ ಅಲ್ಲಿಂದ ಕಳುಹಿಸಿಕೊಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಯಿಂದ ಕೆಲಕಾಲ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದು, ಬಳಿಕ ಪರಿಸ್ಥಿತಿ ಸಹಜಗೊಂಡಿತು.


























