ಪುತ್ತೂರು: ಮಹಿಳೆಗೆ ನಾಯಿ ಕಚ್ಚಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ನಾಯಿಯ ಮಾಲಕರಿಗೆ ಐದು ಸಾವಿರ ರೂ ದಂಡ ವಿಧಿಸಿ ಆದೇಶ ನೀಡಿದೆ.
2025ರ ಡಿಸೆಂಬರ್ 13ರಂದು ಬೆಳಿಗ್ಗೆ 9 ಗಂಟೆಗೆ ಕಣಿಯೂರು ಗ್ರಾಮದ ಮೀನಾಕ್ಷಿ ಎಂಬವರು ಬ್ರಾಂಚ್‌ಗೆ ಬೀಡಿ ಕೊಟ್ಟು ವಾಪಸ್ ತಮ್ಮ ಮನೆಗೆ ಬರುತ್ತಿದ್ದಾಗ ಕಣಿಯೂರು ಗ್ರಾಮದ ಕದ್ರಿ-ಗೋವಿಂದನೂರು ಸಾರ್ವಜನಿಕ ರಸ್ತೆಯಲ್ಲಿ ಕಣಿಯೂರು ಗ್ರಾಮದ ದೇವದಾಸ್ ಮತ್ತು ರತ್ನ ಎಂಬವರಿಗೆ ಸೇರಿದ ನಾಯಿ ಕಚ್ಚಿತ್ತು. ಸರಪಳಿಯನ್ನು ಸರಿಯಾಗಿ ಕಟ್ಟದೆ ನಿರ್ಲಕ್ಷ್ಯ ವಹಿಸಿದ ಕಾರಣ ನಾಯಿ ಮೀನಾಕ್ಷಿ ಅವರ ಎಡ ಕೈಯ ತೋಳು ಮತ್ತು ಎಡ ಕಾಲು ಕೈಗೆ ಕಚ್ಚಿ ಗಾಯವನ್ನುಂಟು ಮಾಡಿದೆ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ್ದ ಮುಖ್ಯ ಆರಕ್ಷಕ ವಿಜು ಅವರು ಬೆಳ್ತಂಗಡಿಯ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಫ್.ಸಿ. ನ್ಯಾಯಾಲಯಕ್ಕೆ ಆರೋಪಿಗಳಾದ ದೇವದಾಸ್ ಮತ್ತು ರತ್ನ ಅವರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ದೇವದಾಸ್ ಮತ್ತು ರತ್ನ ಅವರು ತಪ್ಪಿತಸ್ಥರು ಎಂದು ತೀರ್ಮಾನಿಸಿ ಅವರಿಗೆ ಐದು ಸಾವಿರ ರೂ ದಂಡ ವಿಧಿಸಿದೆ. ದಂಡ ತೆರಲು ತಪ್ಪಿದರೆ ಮೂರು ತಿಂಗಳ ಸಾದಾ ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. 5 ಸಾವಿರ ರೂ ದಂಡದ ಮೊತ್ತವನ್ನು ಗಾಯಾಳು ಮೀನಾಕ್ಷಿ ಅವರಿಗೆ ಪರಿಹಾರವಾಗಿ ನೀಡುವಂತೆಯೂ ನ್ಯಾಯಾಲಯ ಆದೇಶ ಮಾಡಿದೆ.
ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ವಾದಿಸಿದರು.



























