ಗದಗ: ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪದವೀಧರೆಯ ಶವ ಪತ್ತೆಯಾಗಿರುವ ಘಟನೆ ಗದಗದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಹಾಸ್ಟೆಲ್‌ನಲ್ಲಿ ನಡೆದಿದೆ.
25 ವರ್ಷದ ವೀಣಾ ಹಾನಾಪುರ ಮೃತ ಪದವೀಧರೆ.
ವೀಣಾ ಆರ್‌ಡಿಪಿಆರ್ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದಳು. ಈಕೆ ಮೂಲತಃ ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಮೂಲದವಳು.
ವೀಣಾ ಸಾವಿನ ಬಗ್ಗೆ ನಿಖರವಾದ ಮಾಹಿತಿ ಸದ್ಯಕ್ಕೆ ತಿಳಿದು ಬಂದಿಲ್ಲ. ಆದ್ರೆ ನೇಣುಬಿಗಿದ ಸ್ಥಿತಿಯಲ್ಲಿ ವೀಣಾ ಶವ ಪತ್ತೆಯಾದಾಗ, ಕಾಲುಗಳು ನೆಲಕ್ಕೆ ತಾಗಿದ್ದವು, ಬಿಗಿದಿರುವ ಬಟ್ಟೆ ಕೂಡ ಮಗಳದ್ದಲ್ಲ. ಅಲ್ಲದೇ ಮುಖಕ್ಕೆ ಗಾಯಗಳಾಗಿವೆ. ಇದರಿಂದ ಪೋಷಕರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಮಗಳ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ಸಮಗ್ರ ತನಿಖೆ ನಡೆಸಲು ಆಗ್ರಹಿಸಿದ್ದಾರೆ.
ಗದಗ ಗ್ರಾಮೀಣ ಪೊಲೀಸರು, ವಿವಿ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದೆಡೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.



























