ಮಂಗಳೂರು: ಉಪ್ಪಿನಂಗಡಿಯಲ್ಲಿರುವ ಕಾರ್ತಿಕ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಬಿಹಾರ ಮೂಲದ 15 ವರ್ಷದ ಕಿಶೋರ ಕಾರ್ಮಿಕನೊಬ್ಬ ಪತ್ತೆಯಾಗಿದ್ದಾರೆ.
ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಗೂ ಚೈಲ್ಡ್ ಲೈನ್ ಸಂಯೋಜಕರು ಶುಕ್ರವಾರ ಅನಿರೀಕ್ಷಿತ ತಪಾಸಣೆ ನಡೆಸಿದಾಗ, ಈ ಕಿಶೋರ ಕಾರ್ಮಿಕನನ್ನು ಕ್ಲೀನರ್ ಕೆಲಸಕ್ಕೆ ನೇಮಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳು ತಕ್ಷಣ ಆತನನ್ನು ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಪುನರ್ವಸತಿಗಾಗಿ ಹಾಜರುಪಡಿಸಿದರು.
ತಪ್ಪಿತಸ್ಥ ಮಾಲೀಕರ ಮೇಲೆ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ-1986 ಅನ್ವಯ ಮೊಕದ್ದಮೆ ಹೂಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಮಂಗಳೂರು ವಿಭಾಗ ಸಹಾಯಕ ಕಾರ್ಮಿಕ ಆಯುಕ್ತರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪುತ್ತೂರು ವೃತ್ತದ ಕಾರ್ಮಿಕ ಇಲಾಖೆಯ ಹಿರಿಯ ಕಾರ್ಮಿಕನಿರೀಕ್ಷಕ ವೀರೇಂದ್ರ ಕುಂಬಾರ್, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಶ್ರೀನಿವಾಸ್, ಚೈಲ್ಡ್ ಹೆಲ್ಸ್ ಲೈನ್ ಸಂಯೋಜಕ ಗಣೇಶ್ ಪಿ. ಪಾಲ್ಗೊಂಡಿದ್ದರು.



























