ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುರಕ್ಷತೆ ಹಾಗೂ ಭಕ್ತರ ಅನುಕೂಲದ ದೃಷ್ಟಿಯಿಂದ ಕೈಗೊಂಡಿರುವ ರಸ್ತೆ ಮತ್ತು ಕಾಂಪೌಂಡ್ ನಿರ್ಮಾಣ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಭಕ್ತರ ನಿಯೋಗವೊಂದು ದೇವಳದ ವ್ಯವಸ್ಥಾಪನಾ ಸಮಿತಿಗೆ ಮನವಿ ಸಲ್ಲಿಸಿದೆ.
ಮನವಿಯಲ್ಲಿ, ದೇವಸ್ಥಾನದ ರಸ್ತೆ ಕಾಮಗಾರಿ ಆರಂಭವಾದ ಬಳಿಕ ಕೆಲವರು ಅನಗತ್ಯ ಆಕ್ಷೇಪಗಳನ್ನು ವ್ಯಕ್ತಪಡಿಸಿ ಕಾಮಗಾರಿ ಸ್ಥಗಿತಗೊಳಿಸಲು ಪ್ರಯತ್ನಿಸುತ್ತಿರುವುದಾಗಿ ಆರೋಪಿಸಲಾಗಿದೆ. ದೇವಸ್ಥಾನಕ್ಕೆ ಆಗಮಿಸುವ ಸಾವಿರಾರು ಭಕ್ತರು ಸುಗಮ ಹಾಗೂ ಸುರಕ್ಷಿತವಾಗಿ ಸಂಚರಿಸಲು ಈ ರಸ್ತೆ ಅತ್ಯಗತ್ಯವಾಗಿದ್ದು, ಯಾವುದೇ ವಿಳಂಬವಿಲ್ಲದೆ ಕಾಮಗಾರಿಯನ್ನು ಪೂರ್ಣಗೊಳಿಸಿ ದೇವಸ್ಥಾನದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಭಕ್ತರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಭಕ್ತರಾದ ದಿನೇಶ್ ಪೂಜಾರಿ, ಗಣೇಶ್ ಗೌಡ, ಯತೀಶ್ ಪೂಜಾರಿ, ಆಕಾಶ್ ಹಾಗೂ ಸಂತೋಷ್ ಶೆಣೈ ಅವರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.



























