ಪುತ್ತೂರು: ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರ, ಶ್ರೀಧಾಮ ಮಾಣಿಲದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ 48 ದಿನಗಳ ಶ್ರೀ ಮಹಾಲಕ್ಷ್ಮೀ ಪೂಜೆ ಹಾಗೂ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಅಂಗವಾಗಿ, ಪುತ್ತೂರಿನ ಭಕ್ತರಿಂದ ಆ. 9ರಂದು ‘ಹಸಿರುವಾಣಿ ಹೊರೆಕಾಣಿಕೆ’ ಸಮರ್ಪಣೆ ನಡೆಯಲಿದೆ ಎಂದು ಗೌರವಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜುಲೈ 12ರಿಂದ ಆ. 28ರವರೆಗೆ ನಡೆಯುತ್ತಿರುವ 27ನೇ ವರ್ಷದ ಶ್ರೀ ಮಹಾಲಕ್ಷ್ಮೀ ಪೂಜೆ ಹಾಗೂ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಅಂಗವಾಗಿ, ಆ. 9ರಂದು ಬೆಳಿಗ್ಗೆ 10.30ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ವಿವಿಧ ವಾಹನಗಳಲ್ಲಿ ಬೃಹತ್ ಹೊರೆಕಾಣಿಕೆ ಮೆರವಣಿಗೆ ಶ್ರೀ ಕ್ಷೇತ್ರ ಮಾಣಿಲದತ್ತ ಹೊರಡಲಿದೆ.
ಮಾಣಿಲ ಶ್ರೀ ಕ್ಷೇತ್ರದ 25ನೇ ವರ್ಷದ ಬೆಳ್ಳಿಹಬ್ಬದ ಸಂದರ್ಭದಲ್ಲಿಯೂ ಪುತ್ತೂರಿನ ಭಕ್ತರು ಸಮರ್ಪಿಸಿದ್ದ ಹೊರೆಕಾಣಿಕೆ ಅಭೂತಪೂರ್ವ ಯಶಸ್ಸು ಕಂಡಿತ್ತು. ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ‘ಹಸಿರುವಾಣಿ ಹೊರೆಕಾಣಿಕೆ’ಯನ್ನು ಯಶಸ್ವಿಗೊಳಿಸಬೇಕೆಂದು ಸಮಿತಿ ಮನವಿ ಮಾಡಿದೆ.
ಹೊರೆಕಾಣಿಕೆ ಸಂಗ್ರಹಣಾ ಕಚೇರಿ ಆ. 6ರ ಬೆಳಿಗ್ಗೆಯಿಂದ ಆ. 9ರ ಬೆಳಿಗ್ಗೆಯವರೆಗೆ ಪುತ್ತೂರಿನ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಕಾರ್ಯನಿರ್ವಹಿಸಲಿದೆ. ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷರಾದ ಡಾ. ಸುರೇಶ್ ಮತ್ತೂರಾಯ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಸೀತಾರಾಮ ರೈ ಕೆದಂಬಾಡಿಗುತ್ತು, ಸಮಿತಿಯ ಅಧ್ಯಕ್ಷ ಕೃಷ್ಣ ಎಂ. ಅಳಿಕೆ, ನವೀನ್ ಕುಲಾಲ್ ಹಾಗೂ ಕುಲಾಲ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕುಲಾಲ್ ಉಪಸ್ಥಿತರಿದ್ದರು.



























