ವಿಟ್ಲ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಯುವತಿಯ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಸುಮಾರು 10 ಪವನ್ ಚಿನ್ನಾಭರಣ ಪಡೆದುಕೊಂಡಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿತನನ್ನು ಸುಪ್ರೀತ್ ಗೌಡ ಯಾನೆ ಲತೀಶ್ ಗೌಡ ಎಂದು ಗುರುತಿಸಲಾಗಿದೆ. ಜುಲೈ ತಿಂಗಳಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಯುವತಿಗೆ ಪರಿಚಯವಾದ ಆತ, ಮೆಸೇಜ್ ಮೂಲಕ ಆಕೆಯ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದಾನೆ ಎನ್ನಲಾಗಿದೆ. ಬಳಿಕ ಯುವತಿಗೆ ಅಶ್ಲೀಲ ಚಿತ್ರಗಳನ್ನು ಕಳುಹಿಸುವಂತೆ ಒತ್ತಾಯಿಸಿ, ಚಿತ್ರಗಳನ್ನು ಪಡೆದ ನಂತರ ಆಕೆಯ ಬಳಿಯಿದ್ದ ಚಿನ್ನಾಭರಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ ಎಂದು ದೂರಲಾಗಿದೆ.
ಚಿನ್ನಾಭರಣ ನೀಡದಿದ್ದರೆ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಬಳಿಕ ಆರೋಪಿತನ ಸೂಚನೆಯಂತೆ ಆತನ ಸ್ನೇಹಿತನೊಬ್ಬ ಯುವತಿ ತಿಳಿಸಿದ್ದ ಸ್ಥಳಕ್ಕೆ ತೆರಳಿ ಚಿನ್ನಾಭರಣ ಪಡೆದುಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಂತರ ಮತ್ತೆ ಚಿನ್ನಾಭರಣ ನೀಡುವಂತೆ ಒತ್ತಾಯಿಸಿದಾಗ ಯುವತಿ ಈ ವಿಚಾರವನ್ನು ಮನೆಯವರಿಗೆ ತಿಳಿಸಿದ್ದಾಳೆ. ಮನೆಯವರು ಆರೋಪಿತನನ್ನು ಸಂಪರ್ಕಿಸಿದಾಗ, ಪಡೆದುಕೊಂಡಿರುವ ಚಿನ್ನಾಭರಣವನ್ನು ಹಿಂದಿರುಗಿಸುವುದಾಗಿ ಆತ ಭರವಸೆ ನೀಡಿದ್ದ ಎನ್ನಲಾಗಿದೆ. ಆದರೆ ಚಿನ್ನಾಭರಣವನ್ನು ಹಿಂದಿರುಗಿಸದೆ ಮೋಸ ಮಾಡಿರುವ ಆರೋಪದಡಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

























