ವಿಟ್ಲ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಮಧ್ಯೆ ಇರುವ ಡಿವೈಡರ್ ಮೇಲೆ ಪಲ್ಟಿಯಾಗಿ ಅದರಲ್ಲಿದ್ದವರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಸೂರಿಕುಮೇರು ಸಮೀಪದ ಹಿಂದೂಸ್ತಾನ್ ಪೆಟ್ರೋಲ್ ಬಂಕ್ ಬಳಿ ಆ.6ರಂದು ಸಂಜೆ ನಡೆದಿದೆ.
ಮಂಗಳೂರಿನಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಕಾರು ಸೂರಿಕುಮೇರು ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಪಲ್ಟಿಯಾಗಿದೆ. ಕಾರಿನಲ್ಲಿದ್ದ ನಾಲ್ವರು ಮಕ್ಕಳು ಸೇರಿ ಒಂದೇ ಕುಟುಂಬದ ಆರು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಅರಿತ ಸ್ಥಳೀಯರು ಸ್ಥಳಕ್ಕಾಗಮಿಸಿ ಕಾರಿನೊಳಗೆ ಸಿಲುಕಿದವರನ್ನು ಹೊರತೆಗೆದು ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಸೂರಿಕುಮೇರು ಸಮೀಪದ ಹೆದ್ದಾರಿಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿ ಹಾಗೂ ರಸ್ತೆಯ ಅಸಮರ್ಪಕ ವ್ಯವಸ್ಥೆಯಿಂದಾಗಿ ಕಾರು ಅಪಘಾತಕ್ಕೀಡಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.




























