ವಿಟ್ಲ: ಇಲ್ಲಿನ ಉಕ್ಕುಡ ಒತ್ತೆಸಾರ್ ನಿವಾಸಿ, ಹಿರಿಯ ಆಟೋ ರಿಕ್ಷಾ ಚಾಲಕ ಹಾಗೂ ಕೊರಗಜ್ಜ ದೈವದ ಆರಾಧಕರಾಗಿದ್ದ ವಸಂತ್ ಪೂಜಾರಿ (6೦) ಅವರು ಶುಕ್ರವಾರ ಸಂಜೆ ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾದರು.
ಶುಕ್ರವಾರ ಸಂಜೆ ಸುಮಾರು 5.20ರ ವೇಳೆಗೆ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ವಸಂತ್ ಪೂಜಾರಿ ಅವರಿಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ವಿಟ್ಲದ ಕ್ಲಿನಿಕ್‌ಗೆ ಕರೆದೊಯ್ಯಲಾಯಿತು. ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು.
ಅದರಂತೆ ಅಂಬ್ಯುಲೆನ್ಸ್ ಮೂಲಕ ಮಂಗಳೂರಿಗೆ ಕರೆದೊಯ್ಯಲು ಸಿದ್ಧತೆ ನಡೆಸುತ್ತಿದ್ದ ವೇಳೆ ವಸಂತ್ ಪೂಜಾರಿ ಅವರು ಮಾರ್ಗಮಧ್ಯೆ ಕೊನೆಯುಸಿರೆಳೆದರು. ಬಳಿಕ ಮೃತದೇಹವನ್ನು ವಿಟ್ಲದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು.
ವಸಂತ್ ಪೂಜಾರಿ ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ದೈವಭಕ್ತರಲ್ಲಿ ತೀವ್ರ ಶೋಕ ವ್ಯಕ್ತವಾಗಿದೆ. ಅವರ ನಿಧನದಿಂದ ವಿಟ್ಲ ಪರಿಸರದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಮೃತರು ಪತ್ನಿ ಜಯಂತಿ, ಮಗಳು ಪ್ರತೀಕ್ಷಾ, ಮಗ ಪ್ರಜ್ವಲ್ ಸೇರಿದಂತೆ ಅಪಾರ ಬಂಧು ಬಳಗ, ಮಿತ್ರರನ್ನು ಅಗಲಿದ್ದಾರೆ.




























